ಬೀದರ್: ಸತತ ಸುರಿಯುತ್ತಿರುವ ಮಳೆಯಲ್ಲೇ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಡಗರ, ಸಂಭ್ರಮದ ನಡುವೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಮಂಗಳವಾರ ಶುರುವಾದ ಮಳೆ ಹಬ್ಬದ ದಿನವಾದ ಬುಧವಾರವಾದರೂ ಬಿಡುವು ಕೊಡಬಹುದು ಎಂದು ಜನ ಹಾಗೂ ಗಣೇಶ ಮಂಡಳಿಯವರು ನಿರೀಕ್ಷಿಸಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಯಿತು.
ಒಂದೇ ಸಮನೆ ಮಳೆ ಸುರಿಯಿತು. ಮಳೆ ಲೆಕ್ಕಿಸದೇ ಜನ ನಗರದ ಮೋಹನ್ ಮಾರ್ಕೆಟ್, ಶಿವನಗರ, ಮೈಲೂರ್ ಕ್ರಾಸ್, ವಿದ್ಯಾನಗರ, ನೌಬಾದ್ ಸೇರಿದಂತೆ ಹಲವೆಡೆಗಳಿಗೆ ತೆರಳಿ ಗಣಪನ ಮೂರ್ತಿ, ಬಾಳೆದಿಂಡು, ಕಬ್ಬು, ಹೂ, ಪೂಜಾ ಸಾಮಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಎಲ್ಲೆಲ್ಲೂ ಜನ ಕೊಡೆಗಳನ್ನು ಹಿಡಿದುಕೊಂಡು ಓಡಾಡುವುದು ಕಂಡು ಬಂತು. ಗಣಪನ ಮೂರ್ತಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಒಯ್ದರು.
ಆಯಾ ಗಣೇಶ ಮಂಡಳಿಯವರು ಅವರ ಬಡಾವಣೆಗಳಲ್ಲಿ ಮಳೆಯ ನಡುವೆಯೇ ಪೆಂಡಾಲ್ ಅಲಂಕರಿಸಿ, ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಮಳೆಯ ಕಾರಣ ಹೆಚ್ಚಿನ ಜನರು ಸುಳಿಯಲಿಲ್ಲ. ಎರಡನೇ ದಿನವಾದ ಗುರುವಾರವೂ ಇದೇ ಪರಿಸ್ಥಿತಿ ಇತ್ತು. ಹೆಚ್ಚಿನವರು ಕಾರುಗಳಲ್ಲಿ ಓಡಾಡಿ, ದೂರದಿಂದಲೇ ಆಲಂಕಾರಿಕ ಪೆಂಡಾಲ್ ಕಣ್ತುಂಬಿಕೊಂಡರು. ಕೆಲವರು ಕೊಡೆಗಳ ಸಹಾಯದೊಂದಿಗೆ ಒಳಗೆ ಹೋಗಿ ದೇವರ ದರ್ಶನ ಪಡೆದರು.
‘ಬೀದರ್ ನಗರವೊಂದರಲ್ಲೇ 167 ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಐದನೇ ದಿನ (ಆ.31) ಗಣೇಶನ ವಿಸರ್ಜನೆಯ ಮೆರವಣಿಗೆಯಲ್ಲಿ 35ರಿಂದ 40 ಮೂರ್ತಿಗಳು ಬರುವ ಸಾಧ್ಯತೆ ಇದೆ. ಮಳೆ ಇದ್ದರೂ ಸಹ ಹಬ್ಬದ ಸಂಭ್ರಮ ಕಡಿಮೆಯಾಗಿಲ್ಲ. ಎಲ್ಲ ಕಡೆ ಸಂಭ್ರಮ ಮನೆ ಮಾಡಿದೆ. ಕೊನೆಯ ದಿನವೂ ಇದೇ ಸಂಭ್ರಮ ಇರಲಿದೆ’ ಎಂದು ಗಣೇಶ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
-167 ಕಡೆಗಳಲ್ಲಿ ಗಣಪನ ಪ್ರತಿಷ್ಠಾಪನೆ ಮಳೆಯಲ್ಲೇ ಮೊದಲೆರೆಡು ದಿನ ಪೂಜೆ ಆಗಸ್ಟ್ 31ರಂದು ಮೂರ್ತಿಗಳ ವಿಸರ್ಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.