
ಬೀದರ್: ಲಿಂಗತ್ವ ಅಲ್ಪಸಂಖ್ಯಾತೆ ಸುಕನ್ಯಾ ಮೇಲೆ ಹಲ್ಲೆ ನಡೆಸಿರುವುದು ಖಂಡನಾರ್ಹವಾಗಿದ್ದು, ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸಂಘಟನೆಯ ಸದಸ್ಯ ಭೀಮ ಆಗ್ರಹಿಸಿದರು.
ಬೆಂಗಳೂರಿನ ಕೃಷ್ಣರಾಜಪುರ ನಿವಾಸಿ ಸುಕನ್ಯಾ ಅವರ ಮೇಲೆ ನಡೆದ ಭೀಕರ ಹಲ್ಲೆ, ಅಪಹರಣ, ಅಕ್ರಮ ಬಂಧನ ಮತ್ತು ಬಲವಂತದಿಂದ ತಲೆ ಬೋಳಿಸಿ ಹೀನ ಕೃತ್ಯ ಎಸಗಿದವರು ಮನುಷ್ಯ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಾಗರಿಕ ಸಮಾಜದ ಸಂಘಟನೆಗಳು ಮತ್ತು ಹೋರಾಟಗಾರರ ಸಮಯೋಚಿತ ಮಧ್ಯಸ್ಥಿಕೆಯಿಂದ ಪೊಲೀಸರು ಸುಕನ್ಯಾ ಅವರನ್ನು ರಕ್ಷಿಸಿದರು. ಎಫ್‌ಐಆರ್ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈ ಕ್ರೂರ ಘಟನೆಯಿಂದ ಮನಸ್ಸಿಗೆ ಘಾಸಿಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, ಸುಕನ್ಯಾ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರಿಗೆ ಸುರಕ್ಷತೆ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದಾರ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಉದ್ಯಮಶೀಲ ಯೋಜನೆಗಳು, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಬೇಕು ಎಂದರು.
ಸಂಘಟನೆಯ ಸದಸ್ಯೆ ರೋಶನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.