ADVERTISEMENT

ಮತದಾರರನ್ನು ಸೆಳೆಯಲು ಶಾಸಕರ ಕಡೆಯಿಂದ ಸೀರೆ ಉಡುಗೊರೆ

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 14:36 IST
Last Updated 27 ಮಾರ್ಚ್ 2023, 14:36 IST
ಭಾಲ್ಕಿ ತಾಲ್ಲೂಕಿನಲ್ಲಿ ಮತದಾರರ ಓಲೈಕೆಗೆ ಶಾಸಕರ ಕಡೆಯಿಂದ ಸೀರೆಗಳನ್ನು ಉಡುಗೊರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ ಕಾರ್ಯಕರ್ತರು ‍ಭಾಲ್ಕಿ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದರು
ಭಾಲ್ಕಿ ತಾಲ್ಲೂಕಿನಲ್ಲಿ ಮತದಾರರ ಓಲೈಕೆಗೆ ಶಾಸಕರ ಕಡೆಯಿಂದ ಸೀರೆಗಳನ್ನು ಉಡುಗೊರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ ಕಾರ್ಯಕರ್ತರು ‍ಭಾಲ್ಕಿ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದರು   

ಭಾಲ್ಕಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರನ್ನು ಓಲೈಸಲು ಶಾಸಕ ಈಶ್ವರ ಖಂಡ್ರೆ ಅವರು ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಶಾಸಕರ ನಿವಾಸದಲ್ಲಿನ ಸೀರೆಗಳನ್ನು ವಶಕ್ಕೆ ಪಡೆದು ಈ ಕೃತ್ಯಕ್ಕೆ ಸಾಥ್ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಒತ್ತಾಯಿಸಿದರು.

ಪಟ್ಟಣದ ನಗರ ಪೊಲೀಸ್‌ ಠಾಣೆ ಎದುರು ಸೋಮವಾರ ಕಾರ್ಯಕರ್ತರೊಂದಿಗೆ ದಿಢೀರ್‌ ಧರಣಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೊಂದು ವಾರದಿಂದ ಶಾಸಕ ಈಶ್ವರ ಖಂಡ್ರೆ ಅವರ ಕಡೆಯಿಂದ ರಾಜರೋಷವಾಗಿ ತಾಲ್ಲೂಕಿನೆಲ್ಲೆಡೆ ಮತದಾರರಿಗೆ ಸೀರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನು ತಡೆಯುವಂತೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಸೋಮವಾರ ನನ್ನ ನಿವಾಸದ ಪಕ್ಕದಲ್ಲೇ ಶಾಸಕರ ಕಡೆಯವರು ಇನೋವಾ ಕಾರ್‌ನಲ್ಲಿ ಸಾವಿರಾರೂ ಸೀರೆಗಳನ್ನು ತಂದು ಮತದಾರರಿಗೆ ವಿತರಿಸಿದರು ಎಂದು ತಿಳಿಸಿದರು.
ಕಾರ್ಯಕರ್ತರೊಂದಿಗೆ ಇನೋವಾ ಕಾರ್ ತಡೆದು ಸಾವಿರಾರೂ ಸೀರೆಗಳನ್ನು ಜನರೆದರು ಇಟ್ಟಿದ್ದೇವೆ. ಇನೋವಾ ಕಾರ್ ಸೀರೆ ಸಮೇತ ಪೋಲಿಸರ ವಶಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಅವರ ಕಾರ್ಯಕರ್ತ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ ಅವರು, ಸಾವಿರಾರೂ ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳುವ ಶಾಸಕರು ₹ 50 ಬೆಲೆಯ ಸೀರೆಗಳನ್ನು ಮತದಾರರಿಗೆ ನೀಡಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಒಗ್ಗಟ್ಟಿನ ಪರಿಣಾಮ ಈ ಬಾರಿ ಚುನಾವಣೆಯಲ್ಲಿ ಶಾಸಕರಿಗೆ ಸೋಲಿನ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ವಾಮ ಮಾರ್ಗದಿಂದ ಚುನಾವಣೆಯಲ್ಲಿ ಗೆಲ್ಲಲು ಹೊರಟ್ಟಿದ್ದಾರೆ. ಸೀರೆ ಹಂಚಿಕೆ ಸಂಬಂಧ ವಿವಿಧ ಕಲಂ ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಪ್ರಮುಖರಾದ ಜಗದೀಶ ಖಂಡ್ರೆ, ಜರ್ನಾಧನ ಬಿರಾದರ, ಗೋವಿಂದರಾವ್‌ ಬಿರಾದರ, ಪಾಂಡುರಂಗ ಕನಸೆ, ಪ್ರವೀಣ ಸವರೆ, ಬಾಬುರಾವ್‌ ಧೋಪೆ, ಅನಿಲ್‌ ಕುಂದೆ, ಕಿರಣ ಖಂಡ್ರೆ, ಸಂಜೀವ ಶಿಂದೆ, ರಫಿಕ ಚೌಧರಿ, ಜೈರಾಜ ಕೊಳ್ಳಾ, ಸಂಗಮೇಶ ಭೂರೆ, ಬಿಬಿಶನ ಬಿರಾದರ, ಕೈಲಾಸ ಪಾಟೀಲ, ನವನಾಥ ಪಾಟೀಲ, ಕನಕ ಮಲ್ಲೇಶಿ, ದೀಪಕ ಶಿಂದೆ, ಸಂಗಮೇಶ ಟೆಂಕಾಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* * *


ಬಿಜೆಪಿ ಮುಖಂಡರಿಂದ ಮಹಿಳೆಯರಿಗೆ ಜೀವ ಬೆದರಿಕೆ; ಆರೋಪ

ADVERTISEMENT

ಭಾಲ್ಕಿ: ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ, ಅವರ ಸಂಗಡಿಗರು ಕಾರು ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿ ಮಹಿಳೆಯರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಾಡಗಿ ಗ್ರಾಮದ ರೇಖಾ ವಿಲಾಸ ಪಾಟೀಲ, ಬಿಜೆಪಿ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿರುವ ಅವರು, ಪಟ್ಟಣದ ಸತ್ಯಸಾಯಿ ಪಬ್ಲಿಕ್ ಶಾಲೆಯ ರಸ್ತೆಯಿಂದ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾವು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ, ಕೈಲಾಸ ಪಾಟೀಲ ಮತ್ತು 15,20 ಗೂಂಡಾಗಳು ಸೇರಿ ನಮ್ಮನ್ನು ಏಕಾಏಕಿ ಅಡ್ಡಗಟ್ಟಿ ಕಾರಿನಿಂದ ಒತ್ತಾಯ ಪೂರ್ವಕವಾಗಿ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಮನಬಂದಂತೆ ನಿಂದಿಸಿ, ಜೀವ ಬೆದರಿಕೆ ಹಾಕಿ ನಮ್ಮ ಕಾರಿನ ಕೀಲಿ ಕಸಿದು ಚಾಲಕ ರಾಜಕುಮಾರ ಹೊಸಮನಿ ಎಂಬುವರನ್ನು ಹೊಡೆದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾತ್ಮ ಗಾಂಧಿ ವೃತ್ತದ ವರೆಗೂ 15, 20 ಜನರ ಗುಂಪು ನಮ್ಮ ಕಾರ್‌ ನ್ನು ಹಿಂಬಾಲಿಸಿ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಂತರ ನಾವು ನಮ್ಮ ರಕ್ಷಣೆಗಾಗಿ ಅವರಿಂದ ತಪ್ಪಿಸಿ ಕೊಂಡಿದ್ದೇವೆ ಎಂದು ಹೇಳಿದ್ದಾಋಎ.

ಇದನ್ನು ವಿಡಿಯೊ ಚಿತ್ರಿಕರಣ ಕೂಡ ಮಾಡಿಕೊಂಡಿದ್ದಾರೆ. ಕೂಡಲೇ ಆ ವಿಡಿಯೊ ಮುಟ್ಟುಗೋಲು ಹಾಕುವುದರ ಜತೆಗೆ ಡಿ.ಕೆ.ಸಿದ್ರಾಮ ಸೇರಿ 15, 20 ಮಂದಿ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲ್ಲೂಕು ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ಮಹಾದೇವ ಬಿ., ಚಂದು, ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.