ADVERTISEMENT

ಬೆಳೆಗಳ ಬೆಂಬಲ ಬೆಲೆ ಪರಿಷ್ಕರಣೆಗೆ ಆಗ್ರಹ: ಪ್ರಧಾನಿಗೆ ಮನವಿ ಪತ್ರ

ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 9:29 IST
Last Updated 1 ಡಿಸೆಂಬರ್ 2018, 9:29 IST
ಪ್ರತಿ ಆರು ತಿಂಗಳಿಗೊಮ್ಮೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು
ಪ್ರತಿ ಆರು ತಿಂಗಳಿಗೊಮ್ಮೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು   

ಬೀದರ್: ಸರ್ಕಾರಿ ನೌಕರರಿಗೆ ಕೊಡಲಾಗುವ ತುಟ್ಟಿ ಭತ್ಯೆ ಮಾದರಿಯಲ್ಲಿ ಆರು ತಿಂಗಳಿಗೊಮ್ಮೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನೂ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಕೃಷಿ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಸಭೆ ಕರೆಯಬೇಕು. ಶಾಸಕರು, ಸಂಸದರು, ಸಚಿವರಿಗೆ ನಿವೃತ್ತಿ ವೇತನ ಕೊಡುತ್ತಿರುವ ಕಾರಣ ರೈತರಿಗೂ ಮಾಸಿಕ ₹ 6,000 ಗೌರವ ಧನ ಕೊಡಬೇಕು. ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ಎಲ್ಲ ತಾಲ್ಲೂಕುಗಳಲ್ಲಿ ಭೂ ಮಂಡಳಿ ರಚಿಸಬೇಕು. ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ₹ 25 ಲಕ್ಷ ಪರಿಹಾರ ಒದಗಿಸಬೇಕು. ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರ ಮಾಸಾಶನವನ್ನು ₹ 6 ಸಾವಿರಕ್ಕೆ ಹೆಚ್ಚಿಸಬೇಕು. ಆಹಾರ ಭದ್ರತೆ ಕಾಯ್ದೆಯ ಅನುಸಾರ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಆಹಾರಧಾನ್ಯ ಬಿಡುಗಡೆ ಮಾಡಬೇಕು. ಪಡಿತರ ಚೀಟಿ ಮಂಜೂರು ಮಾಡುವಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಯಬೇಕು. ಬೀದರ್ ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಸದಸ್ಯರಾದ ಪ್ರಭು ಹೂಚಕನಳ್ಳಿ, ಮುನಿರೊದ್ದಿನ್, ನಜೀರ್ ಅಹಮ್ಮದ್‌ ಚೊಂಡಿ, ಗುರುಪಾದಯ್ಯ ಸ್ವಾಮಿ, ಬಾಬುರಾವ್ ವಾಡೇಕರ್, ಖದೀರ್‌ಸಾಬ್, ಶಫಾಯತ್ ಅಲಿ, ಅಹಮ್ಮದ್ ಜಂಬಗಿ, ಪ್ರಭು ಟಿ., ಚಂದ್ರಭಾನ ಅಲಮಾಸಪುರ, ವಿಶ್ವನಾಥ ಪಿ. ಬಿರಾದಾರ, ಮಚ್ಚೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.