ADVERTISEMENT

ಅಧ್ಯಯನದಿಂದ ಗುರಿ ಸಾಧನೆ ಸಾಧ್ಯ: ಜಿಲ್ಲಾಧಿಕಾರಿ ರಾಮಚಂದ್ರನ್ ಅಭಿಮತ

ಶೈಕ್ಷಣಿಕ ಕ್ಷೇತ್ರದ ಆಯ್ಕೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 15:22 IST
Last Updated 12 ಅಕ್ಟೋಬರ್ 2020, 15:22 IST
ಬೀದರ್‌ನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗದ ಸಿಬ್ಬಂದಿಯ ಮಕ್ಕಳಿಗೆ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ಕ್ಷೇತ್ರದ ಆಯ್ಕೆ, ಸ್ಫೂರ್ತಿ, ಪ್ರೇರಣೆ ಮತ್ತು ಉಜ್ವಲ ಭವಿಷ್ಯ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಬೀದರ್‌ನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗದ ಸಿಬ್ಬಂದಿಯ ಮಕ್ಕಳಿಗೆ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ಕ್ಷೇತ್ರದ ಆಯ್ಕೆ, ಸ್ಫೂರ್ತಿ, ಪ್ರೇರಣೆ ಮತ್ತು ಉಜ್ವಲ ಭವಿಷ್ಯ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು   

ಬೀದರ್: ‘ಸತತ ಅಧ್ಯಯನದಿಂದ ಗುರಿ ಸಾಧನೆ ಸಾಧ್ಯವಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅಭಿಪ್ರಾಯಪಟ್ಟರು.

ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗದ ಸಿಬ್ಬಂದಿ ಮಕ್ಕಳಿಗೆ ಆಯೋಜಿಸಿದ್ದ ಶೈಕ್ಷಣಿಕ ಕ್ಷೇತ್ರದ ಆಯ್ಕೆ, ಸ್ಫೂರ್ತಿ, ಪ್ರೇರಣೆ ಮತ್ತು ಉಜ್ವಲ ಭವಿಷ್ಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ಕೌಶಲ ಹೊಂದಿದ್ದಲ್ಲಿ ಜೀವನದಲ್ಲಿ ಯಶ ಸಾಧಿಸಬಹುದು’ ಎಂದು ತಿಳಿಸಿದರು.

ADVERTISEMENT

‘ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿವೆ ಎಂದು ವಿದ್ಯಾರ್ಥಿಗಳು ಕೀಳರಿಮೆ ಹೊಂದಬಾರದು. ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡು ಮರಳಿ ಯತ್ನವ ಮಾಡಿದ್ದಲ್ಲಿ ಜಯ ಸಾಧಿಸಬಹುದು’ ಎಂದು ಸಲಹೆ ಮಾಡಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರ್ಗಿಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಮಾತನಾಡಿ, ‘ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ನೀಡಲು ಕಲಬುರ್ಗಿಯ ಎಲ್ಲ ಒಂಬತ್ತು ವಿಭಾಗಗಳಲ್ಲಿ ಈ ರೀತಿಯ ಕಾರ್ಯಗಾರಗಳನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮಾತನಾಡಿ, ‘ಮಕ್ಕಳು ಉನ್ನತ ಗುರಿ ಹೊಂದಿ ಓದಿದಾಗ ಉನ್ನತ ಹುದ್ದೆಗೆ ಸೇರುವ ಅವಕಾಶ ದೊರಕುತ್ತದೆ. ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದರೂ ಶಿಕ್ಷಣಕ್ಕೆ ಯಾವುದೇ ರೀತಿಯ ಕೊರತೆ ಆಗದು. ಸರ್ಕಾರದ ಶೈಕ್ಷಣಿಕ ಯೋಜನೆಗಳ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿನಿತ್ಯ ಓದಿನ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಾಧ್ಯ’ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ರಚಿಸಿದ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು "ಬಿದರಿ" ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಅಶ್ವಿನಿ ಸ್ವಾಮಿ ಹಾಗೂ ತಂಡದವರು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಟ್ರೆಪ್ಪ, ಬೀದರ್ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಸ್ . ಫುಲೇಕರ್, ಆಡಳಿತ ಅಧಿಕಾರಿ ಮಹಾದೇವಪ್ಪ, ಪ್ರಭುಸ್ವಾಮಿ ಇದ್ದರು.
ಮಂಗಲಾ ಭಾಗವತ್ ನಿರೂಪಿಸಿದರು. ಇಲಾಖೆಯ ಲೆಕ್ಕಾಧಿಕಾರಿ ಬಸವಂತಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.