ADVERTISEMENT

ಬೀದರ್‌: ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆಯೇರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 7:37 IST
Last Updated 25 ಆಗಸ್ಟ್ 2023, 7:37 IST
ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಬೀದರ್‌ನಲ್ಲಿ ಗುರುವಾರ ಸಂಜೆ ಹೂ ಖರೀದಿಸಿದರು
ಪ್ರಜಾವಾಣಿ ಚಿತ್ರ: ಗುರುಪಾದಪ್ಪ ಸಿರ್ಸಿ
ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಬೀದರ್‌ನಲ್ಲಿ ಗುರುವಾರ ಸಂಜೆ ಹೂ ಖರೀದಿಸಿದರು ಪ್ರಜಾವಾಣಿ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್‌: ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಆದರೆ, ಹಬ್ಬದ ಸಂಭ್ರಮ ಮಾತ್ರ ಕುಸಿದಿಲ್ಲ.

ದಿಢೀರನೆ ಹೂ, ಹಣ್ಣಿನ ದರದಲ್ಲಿ ಭಾರಿ ಏರಿಕೆ ಉಂಟಾಗಿದೆ. ಆದರೆ, ಶುಕ್ರವಾರ (ಆ.25) ಹಬ್ಬವನ್ನು ಆಚರಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಜನ ಅವರ ಬಜೆಟ್‌ಗೆ ಅನುಗುಣವಾಗಿ, ಚೌಕಾಸಿ ಮಾಡಿ ಮಾರುಕಟ್ಟೆಯಲ್ಲಿ ಗುರುವಾರ ಹೂ, ಹಣ್ಣು ಖರೀದಿಸಿದ ದೃಶ್ಯ ಕಂಡು ಬಂತು.

ಹೋದ ವಾರ ಪ್ರತಿ

ADVERTISEMENT

ಪ್ರತಿ ಕೆ.ಜಿ ಸೇವಂತಿ ಹೂ ಹೋದ ವಾರ ₹150 ಕೆ.ಜಿ ಇತ್ತು. ಈ ವಾರಕ್ಕೆ ₹500ಕ್ಕೆ ಏರಿಕೆಯಾಗಿದೆ. ಸುಗಂಧರಾಜ ಕೂಡ ಹಿಂದೆ ಬಿದ್ದಿಲ್ಲ. ಪ್ರತಿ ಕೆ.ಜಿ. ಸುಗಂಧರಾಜ ₹350ಕ್ಕೆ ಮಾರಾಟ ಮಾಡಲಾಯಿತು. ಹೋದ ವಾರ ₹100 ಇತ್ತು. ಸೇವಂತಿ ₹150ರಿಂದ ₹500ಕ್ಕೆ ಹೆಚ್ಚಾಗಿದೆ. 

‘ಎಲ್ಲಾ ಹೂಗಳ ಬೆಲೆ ಭಾರಿ ಏರಿಕೆ ಆಗಿದೆ. ಬೀದರ್‌ ಜಿಲ್ಲೆಗೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದಲೇ ಹೂ ಬರುತ್ತದೆ. ಒಂದು ವಾರದಲ್ಲಿ ದಿಢೀರನೆ ಹೆಚ್ಚಾಗಿದೆ. ಮಾಲೂ ಕಡಿಮೆ ಬರುತ್ತಿದೆ. ಬೇಡಿಕೆ ಹೆಚ್ಚಾಗಿದ್ದು ಇದಕ್ಕೆ ಕಾರಣ’ ಎಂದು ಹೂವಿನ ವ್ಯಾಪಾರಿ ರಾಜು ತಿಳಿಸಿದರು. 

ಒಂದು ಮೊಳ ಕನಕಾಂಬರ, ಮಲ್ಲಿಗೆ ₹20ರಿಂದ ₹50ಕ್ಕೆ ಏರಿಕೆಯಾಗಿದೆ. ಇನ್ನು, ಹಣ್ಣುಗಳ ದರವೂ ಗಗನಕ್ಕೆ ಏರಿದೆ. ಉತ್ತಮ ಗುಣಮಟ್ಟದ ಸೇಬು ₹250ರಿಂದ ₹300ಕ್ಕೆ ಮಾರಾಟ ಆಗಿದೆ. ಹೋದ ವಾರ ₹180ರಿಂದ ₹200 ಇತ್ತು. ದಾಳಿಂಬೆ ₹100ರಿಂದ ₹150ಕ್ಕೆ ಹೆಚ್ಚಾಗಿದೆ. ಪ್ರತಿ ಡಜನ್‌ ಬಾಳೆಹಣ್ಣು ₹30ರಿಂದ ₹60, ಸಪೋಟ ₹80ರಿಂದ ₹130ಕ್ಕೆ ಏರಿಕೆ ಕಂಡಿದೆ.

ಬೆಲೆ ಲೆಕ್ಕಿಸದೆ ಜನ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಅಕ್ಕಮಹಾದೇವಿ ಕಾಲೇಜು ಸಮೀಪ, ಮೋಹನ್‌ ಮಾರ್ಕೆಟ್‌, ವಿದ್ಯಾನಗರ, ಮೈಲೂರು ಕ್ರಾಸ್‌, ಗುಂಪಾ ಸರ್ಕಲ್‌ನಲ್ಲಿ ಖರೀದಿಗೆ ಜನ ಮುಗಿಬಿದ್ದಿದ್ದರು. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.