ADVERTISEMENT

ಗೋದಾಮಿಗೆ ತೊಗರಿ ಸಾಗಣೆ ವಿಳಂಬ

ಲಾರಿ ಚಾಲಕರಿಂದ ಹಣಕ್ಕೆ ಬೇಡಿಕೆ: ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:29 IST
Last Updated 26 ಫೆಬ್ರುವರಿ 2020, 12:29 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಕೇಂದ್ರದಲ್ಲಿ ಖರೀದಿಸಿದ ತೊಗರಿ ಸಾಗಾಟ ವಿಳಂಬಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಕೇಂದ್ರದಲ್ಲಿ ಖರೀದಿಸಿದ ತೊಗರಿ ಸಾಗಾಟ ವಿಳಂಬಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು   

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದ ಖರೀದಿ ಕೇಂದ್ರದಲ್ಲಿ ಖರೀದಿಸಿದ ತೊಗರಿಯನ್ನು ಸಾಗಿಸಲು ಲಾರಿ ಚಾಲಕರು ವಿಳಂಬ ಮಾಡುತ್ತಿರುವುದರಿಂದ ರೈತರು ರಾತ್ರಿಯಿಡೀ ತೊಗರಿಚೀಲದ ಕಾವಲಿಗೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಈ ಖರೀದಿ ಕೇಂದ್ರದ ಆವರಣ, ಸಹಕಾರ ಸಂಘದ ಉಗ್ರಾಣ ತೊಗರಿ ಚೀಲಗಳಿಂದ ಭರ್ತಿಯಾಗಿದೆ. ತೊಗರಿ ಖರೀದಿ ಕಾರ್ಯ ಮುಂದುವರಿದರೂ ಕಲಬುರ್ಗಿ ಉಗ್ರಾಣಕ್ಕೆ ಸಾಗಿಸಲು ಲಾರಿ ಚಾಲಕರು ಪ್ರತಿ ಲಾರಿಗೆ ₹1ರಿಂದ 2 ಸಾವಿರ ಹಣ ಕೇಳುತ್ತಿದ್ದಾರೆ. ಇಷ್ಟೊಂದು ಹಣ ಯಾರು ಕೊಡಬೇಕು. ನ್ಯಾಪೆಡ್‌ ಕಂಪನಿಯು ಪ್ರತಿ ಲಾರಿ ಮತ್ತು ಚಾಲಕರು ಹಾಗೂ ಕೂಲಿಕಾರ್ಮಿಕರಿಗೆ ದರ ನಿಗದಿಪಡಿಸಿದ್ದಾರೆ. ಆದರೂ ರೈತರಿಂದ ಹಣ ವಸೂಲಿಗೆ ಮುಂದಾಗಿರುವುದಕ್ಕೆಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಕಾಂತ ಕಡಗಂಚಿ ಆಕ್ರೋಶ ವ್ಯಕ್ತಪಡಿಸಿದರು.

ಮಾದನ ಹಿಪ್ಪರಗಾ ಸುತ್ತಲಿನ ಗ್ರಾಮದ ಒಟ್ಟು 1250 ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದಾರೆ. ಮಂಗಳವಾರದ ಅಂತ್ಯದವರೆಗೆ 260 ರೈತರ ತೊಗರಿ ಖರೀದಿಸಲಾಗಿದೆ. 600ಕ್ಕೂ ಹೆಚ್ಚು ಚೀಲ ತೊಗರಿ ದಾಸ್ತಾನು ಇಲ್ಲಿದ್ದು, ಹೊಸ ರೈತರೂ ತೊಗರಿ ತರಲು ಅಡ್ಡಿಯಾಗಿದೆ. ಅಲ್ಲದೆ ರೈತರಿಂದ ತೊಗರಿ ಖರೀದಿಯಾದರೂ ಅದಕ್ಕೆ ಸೂಕ್ತ ರಕ್ಷಣೆ ಇಲ್ಲವಾಗಿದೆ.

ADVERTISEMENT

ರಾತ್ರಿ ಸಮಯದಲ್ಲಿ ಹಂದಿಗಳ ಹಾವಳಿ, ಕಿಡಿಗೇಡಿಗಳ ಉಪಟಳ ತಪ್ಪಿದ್ದಲ್ಲ. ತೊಗರಿ ಚೀಲ ಹರಿದು ತೊಗರಿ ಹಾಳಾಗುತ್ತಿದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಶಿವಲಿಂಗಪ್ಪ ಜಮದಾರ ತಿಳಿಸಿದರು.

ಲಾರಿ ಬಂದು ತೊಗರಿ ತೆಗೆದುಕೊಂಡು ಹೋದರೆ ಮಾತ್ರ ಖರೀದಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಖರೀದಿ ಕಾರ್ಯಕ್ಕೆ ಅಡಚಣೆ ಆಗುತ್ತಿರುವುದರಿಂದ ಬುಧವಾರದಿಂದ ತೊಗರಿ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸಹಕಾರ ಸಂಘದ ಕಾರ್ಯದರ್ಶಿ ಶಿವಕುಮಾರ ಪಾಟೀಲ ತಿಳಿಸಿದರು.

ಲಾರಿ ಚಾಲಕರ ವರ್ತನೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ರೈತರು ಮುಂದಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರೈತರಾದ ಸಿದ್ದಾರೂಡ, ಶಿವಲಿಂಗಪ್ಪ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.