ADVERTISEMENT

‘ಸದೃಢ ದೇಹದಿಂದ ಉತ್ತಮ ಆರೋಗ್ಯ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 6:05 IST
Last Updated 5 ಡಿಸೆಂಬರ್ 2021, 6:05 IST
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ ಫಿಟ್‌ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ ಫಿಟ್‌ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು   

ಭಾಲ್ಕಿ: ಸದೃಢ ದೇಹದಿಂದ ಆರೋಗ್ಯಕರ ಮನಸ್ಸು, ಆರೋಗ್ಯಕರ ಮನಸ್ಸಿನ ಪ್ರಜೆಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ ಫಿಟ್‌ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಫಿಟ್‌ ಇಂಡಿಯಾ ಅಭಿಯಾನ ಇಂದು ಬಹು ಅಗತ್ಯವಾಗಿದೆ. ಇದು ಆರೋಗ್ಯಕರ ಜೀವನದತ್ತ ಕರೆದೊಯ್ಯಲಿದೆ. ತಂತ್ರಜ್ಞಾನದ ವ್ಯಾಪಕ ಬಳಕೆಯು ನಮ್ಮನ್ನು ನಿಷ್ಕ್ರಿಯ, ಚಟುವಟಿಕೆ ರಹಿತ ಜೀವನ ಶೈಲಿಗೆ ಕೊಂಡೊಯ್ಯಲಿದೆ. ಕೆಲ ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ ಎಂಟು ಹತ್ತು ಮೈಲುಗಳಷ್ಟು ದೂರ ನಡೆದು ಹೋಗುತ್ತಿದ್ದ. ಸೈಕಲಿಂಗ್‌ ಮಾಡುತ್ತಿದ್ದ. ಇಂದು ಅಂತಹ ಹವ್ಯಾಸಗಳಲ್ಲಿ ತೊಡ ಗಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ADVERTISEMENT

ಯುವಕರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 12 ವರ್ಷದ ಮಕ್ಕಳಿಗೆ ಮಧುಮೇಹ, 30 ವರ್ಷದ ಯುವಕನಿಗೆ ಹೃದಯಾಘಾತ ಎಂಬಂತಹ ಸುದ್ದಿಗಳು ದಿಗ್ಭ್ರಮೆಗೊಳಿಸುತ್ತಿವೆ. ಜೀವನಶೈಲಿಯ ಬದಲಾವಣೆ ಮತ್ತು ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಫಿಟ್ ಇಂಡಿಯಾ ಪ್ರತಿಜ್ಞೆ ಸ್ವೀಕರಿಸಲಾಯಿತು.

ಫಿಟ್ ಇಂಡಿಯಾ ಸಪ್ತಾಹ 2021ರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಖಯಮುದ್ದೀನ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಕುಮಾರ ವಿಚಾರ, ಪ್ರಭಾರಿ ಮುಖ್ಯಶಿಕ್ಷಕ ಗೋಪಾಲ ಜಾಧವ, ವಸಂತ್ ಪಾಟೀಲ, ಸಂತೋಷ ನೆಲವಾಡೆ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಚೆನ್ನವೀರ ಚಕ್ರಸಾಲಿ ಸ್ವಾಗತಿಸಿದರು. ಶಕೀಲ ನಿರೂಪಿಸಿದರು. ಸೂರ್ಯಕಾಂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.