ADVERTISEMENT

23 ಸಾವಿರ ಪ್ರಕರಣ ಇತ್ಯರ್ಥ: ₹10.36 ಕೋಟಿ ವಸೂಲಿ

ಲೋಕ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ–ನ್ಯಾಯಾಧೀಶ ಸಿದ್ರಾಮಪ್ಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 15:42 IST
Last Updated 12 ಜುಲೈ 2023, 15:42 IST
ಸಿದ್ರಾಮಪ್ಪ ಕಲ್ಯಾಣರಾವ ಕನಕಟ್ಟೆ
ಸಿದ್ರಾಮಪ್ಪ ಕಲ್ಯಾಣರಾವ ಕನಕಟ್ಟೆ   

ಬೀದರ್‌: ‘ಜು.8ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 23,340 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹10.36 ಕೋಟಿ ವಸೂಲಾತಿ ಹಾಗೂ ಪರಿಹಾರ ಒದಗಿಸಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕಲ್ಯಾಣರಾವ ಕನಕಟ್ಟೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 17,521 ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹8.77 ಕೋಟಿ ವಸೂಲಾತಿ ಮಾಡಿ ಪರಿಹಾರ ಒದಗಿಸಲಾಗಿದೆ. ಜಿಲ್ಲೆಯ ಒಟ್ಟು 12,963 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 5,819 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹1.58 ಕೋಟಿ ವಸೂಲಿ ಮಾಡಿ ಪರಿಹಾರ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಸಂಬಂಧಿಸಿದ 5,454 ಪ್ರಕರಣಗಳ ಪೈಕಿ 111 ಇತ್ಯರ್ಥಗೊಳಿಸಿ, ₹1 ಕೋಟಿ ಬಾಕಿ ವಸೂಲಿ ಮಾಡಲಾಗಿದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳ ನೀರಿನ ತೆರಿಗೆ ಮತ್ತು ಬಿ.ಎಸ್.ಎನ್.ಎಲ್., ಜೆಸ್ಕಾಂ ಬಾಕಿ ಬಿಲ್‌, ಟ್ರಾಫಿಕ್‌ ಚಾಲನ್‌ಗೆ ಸಂಬಂಧಿಸಿದ 5,708 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹53.39 ಲಕ್ಷ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ADVERTISEMENT

ವಿವಾಹ ವಿಚ್ಛೇದನಕ್ಕಾಗಿ ಬಸವಕಲ್ಯಾಣ ಹಾಗೂ ಬೀದರ್‌ನಿಂದ ತಲಾ ಒಂದು ಜೋಡಿ ಅರ್ಜಿ ಸಲ್ಲಿಸಿತ್ತು. ಅದನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ಕಳಿಸಲಾಗಿದೆ. ಹಿಂದಿನ ಲೋಕ ಅದಾಲತ್‌ನಲ್ಲಿ 19 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ಆದರೆ. ಈ ಸಲ ನಾಲ್ಕು ಸಾವಿರ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.