ADVERTISEMENT

ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿಗೆ ಉದ್ಯೋಗ ಆಕಾಂಕ್ಷಿಗಳ ದಂಡು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:51 IST
Last Updated 7 ಅಕ್ಟೋಬರ್ 2020, 2:51 IST
ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿದರು
ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿದರು   

ಜನವಾಡ: ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ಹಾಗೂ ಜಿಲ್ಲಾ ಆಡಳಿತ ವತಿಯಿಂದ ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು.

ಆನ್‍ಲೈನ್‍ನಲ್ಲೇ 2,200ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಹೆಸರು ನೋಂದಾಯಿಸಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ಮೇಳದಲ್ಲಿ ಭಾಗಿಯಾದರು.

ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಮರಳಿದ್ದ ಎಂಸಿಎ, ಎಂಬಿಎ, ಬಿ.ಎಸ್ಸಿ, ಬಿಸಿಎ, ಬಿಬಿಎಂ, ಬಿ.ಕಾಂ., ಡಿಪ್ಲೊಮಾ ಅಭ್ಯರ್ಥಿಗಳೂ ಮೇಳದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಟಾಟಾ ಸ್ಟ್ರೈವ್, ಟಾಟಾ ಮೋಟಾರ್ಸ್, ಜಿಯೊ, ಏರ್‌ಟೆಲ್, ವೊಡಾಫೋನ್, ಐಡಿಯಾ, ಟಿವಿಎಸ್, ಎಚ್‍ಸಿಎಲ್, ಟೆಕ್ ಮಹಿಂದ್ರಾ, ಪೆಟಿಎಂ, ಐಸುಝು ಮೋಟಾರ್ಸ್ ಲಿಮಿಟೆಡ್, ಕಾರ್ವಿ ಫೈನಾನ್ಸ್, ಆ್ಯಕ್ಟ್ ಫೈನಾನ್ಸ್ ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿಗಳು ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ, ಮೌಖಿಕ ಸಂದರ್ಶನ ನಡೆಸಿದರು. ಕೌಶಲ ಪರೀಕ್ಷೆಯನ್ನೂ ಮಾಡಿದರು.

ಉದ್ಯೋಗ ಆಕಾಂಕ್ಷಿಗಳ ಸಾಲು: ಮೇಳದಲ್ಲಿ ಭಾಗವಹಿಸಲು ಹೆಸರು ನೋಂದಣಿಗಾಗಿ ಕಾಲೇಜು ಎದುರು ಬೆಳಿಗ್ಗೆ 8 ಗಂಟೆಯಿಂದಲೇ ಉದ್ಯೋಗ ಆಕಾಂಕ್ಷಿಗಳ ಸಾಲು ಕಂಡುಬಂದಿತು.

ಕೊರೊನಾ ಕಾರಣ ಅಭ್ಯರ್ಥಿಗಳು ಹಾದುಹೋಗುವ ಕಾಲೇಜು ಪ್ರವೇಶ ದ್ವಾರದಲ್ಲೇ ಕ್ರಿಮಿನಾಶಕ ದ್ರಾವಣ ಸಿಂಪಡಿಸುವ ಸೆನ್ಸರ್ ಆಧಾರಿತ ಟನೆಲ್ ಅಳವಡಿಸಲಾಗಿತ್ತು. ಅದರ ಮೂಲಕ ಒಳಗೆ ಬಂದ ಅಭ್ಯರ್ಥಿಗಳ ದೇಹದ ಉಷ್ಣಾಂಶ ತಪಾಸಣೆ ಮಾಡಿ, ಕೈಗೆ ಸ್ಯಾನಿಟೈಸರ್ ಹಾಕಿ, ಮೇಳದ ಸ್ಥಳಕ್ಕೆ ಹೋಗಲು ಅವಕಾಶ ಕಲ್ಪಿಸಲಾಯಿತು.

ಮಾಸ್ಕ್ ಧರಿಸದೆ ಬಂದಿದ್ದ ಕೆಲವರಿಗೆ ಸ್ಥಳದಲ್ಲೇ ಮಾಸ್ಕ್ ಒದಗಿಸಲಾಯಿತು. ಮೇಳದ ಸ್ಥಳದಲ್ಲಿ ಅಂತರ ಕಾಪಾಡಲು ಗುರುತುಗಳನ್ನು ಹಾಕಲಾಗಿತ್ತು. ನೋಂದಣಿ ಕಾರ್ಯಕ್ಕೆ ನಿಯೋಜಿಸಿದ್ದ ಸಿಬ್ಬಂದಿ ಫೇಸ್ ಶೀಲ್ಡ್, ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿದ್ದರು.

‘ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿ ಮೇಳ ಸಂಘಟಿಸಿ ಈ ಭಾಗದ ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜಿಲ್ಲೆ ಮಾತ್ರವಲ್ಲದೆ, ನೆರೆಯ ತೆಲಂಗಾಣ, ಮಹಾರಾಷ್ಟ್ರದ ಅಭ್ಯರ್ಥಿಗಳು ಸಹ ಮೇಳದಲ್ಲಿ ಭಾಗಿಯಾಗಿದ್ದಾರೆ’ ಎಂದು ಕಾಲೇಜು ಪ್ರಾಚಾರ್ಯ ಡಾ. ಸಂಜೀವರೆಡ್ಡಿ ಕೆ. ಹುಡಗಿಕರ್ ತಿಳಿಸಿದರು.

‘ಕೊರೊನಾದಿಂದಾಗಿ ಪದವೀಧರ ಅಭ್ಯರ್ಥಿಗಳು ಹಾಗೂ ನೌಕರಿ ಕಳೆದುಕೊಂಡವರು ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನಲ್ಲಿ ಮೇಳ ಆಯೋಜಿಸಿದ್ದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

‘ಕೊರೊನಾ ನಿಯಮದ ಪ್ರಕಾರ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಮೇಳದಲ್ಲಿ 44 ಹೆಸರಾಂತ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿವೆ’ ಎಂದು ಹೇಳಿದರು.

ಉಪ ಪ್ರಾಚಾರ್ಯೆ ವಿನಿತಾ ಪಾಟೀಲ, ಮನೀಶ್, ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.