ADVERTISEMENT

ಕೋವಿಡ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 12:17 IST
Last Updated 8 ಅಕ್ಟೋಬರ್ 2021, 12:17 IST
ಕೋವಿಡ್ ಲಸಿಕೆ ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಲಸಿಕಾಕರಣ ನಡೆಯಿತು
ಕೋವಿಡ್ ಲಸಿಕೆ ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಲಸಿಕಾಕರಣ ನಡೆಯಿತು   

ಬೀದರ್: ಕೋವಿಡ್ ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಹಾಗೂ ಮಾಳೆಗಾಂವ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕೋವಿಡ್ ಲಸಿಕಾಕರಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಅರ್ಹರು ಲಸಿಕೆ ಕೇಂದ್ರಗಳಿಗೆ ಬಂದು ಲಸಿಕೆ ಪಡೆದುಕೊಂಡರು. ಕೋವಿಡ್ ಲಸಿಕಾಕರಣ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇನ್ನೂ ಲಸಿಕೆ ಪಡೆಯದ ಅನೇಕರ ಮನೆಗೆ ಭೇಟಿ ಕೊಟ್ಟು ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಿದರು.

ಚಿಲ್ಲರ್ಗಿ ಗ್ರಾಮದ ಮೂರು ಹಾಗೂ ಮಾಳೆಗಾಂವದ ಒಂದು ಕೇಂದ್ರದಲ್ಲಿ ಲಸಿಕಾಕರಣ ನಡೆದಿದೆ. ಮಾಳೆಗಾಂವ ಗ್ರಾಮದಲ್ಲಿ 40 ಹಾಗೂ ಚಿಲ್ಲರ್ಗಿಯಲ್ಲಿ 18 ಜನ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಚಿಲ್ಲರ್ಗಿ ಹಾಗೂ ಮಾಳೆಗಾಂವ ಗ್ರಾಮ ಪಂಚಾಯಿತಿಯ ಕೋವಿಡ್ ಲಸಿಕಾಕರಣ ನೋಡಲ್ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ತಿಳಿಸಿದರು.

ADVERTISEMENT

ಎರಡೂ ಪಂಚಾಯಿತಿಗಳಲ್ಲಿ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಮೊದಲ ಹಾಗೂ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಲಸಿಕೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿದೆ. ಜನ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಜಾಶ್ರೀ ಬಿರಾದಾರ, ಆರೋಗ್ಯ ಇಲಾಖೆಯ ಸಿಬ್ಬಂದಿ ಸತ್ಯಮಾಲಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.