ADVERTISEMENT

ಗೋರಟಾ ಆಗಲಿಲ್ಲ ಆದರ್ಶ ಗ್ರಾಮ

ಸಂಸದರ ಘೋಷಣೆಯೇ ಆಯಿತು ಶಾಪ

ಚಂದ್ರಕಾಂತ ಮಸಾನಿ
Published 14 ಸೆಪ್ಟೆಂಬರ್ 2019, 15:35 IST
Last Updated 14 ಸೆಪ್ಟೆಂಬರ್ 2019, 15:35 IST
ಬಸವಕಲ್ಯಾಣ ತಾಲ್ಲೂಕಿನ ಗೋರಟಾದಲ್ಲಿ ರಜಾಕರ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟಗಾರರು ರಕ್ಷಣೆ ಪಡೆದಿದ್ದ ಮನೆ
ಬಸವಕಲ್ಯಾಣ ತಾಲ್ಲೂಕಿನ ಗೋರಟಾದಲ್ಲಿ ರಜಾಕರ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟಗಾರರು ರಕ್ಷಣೆ ಪಡೆದಿದ್ದ ಮನೆ   

ಬೀದರ್‌: ಬಸವಕಲ್ಯಾಣ ತಾಲ್ಲೂಕಿನ ಗೋರಟಾ ಬಹಳ ಪುರಾತನ ಊರು. ರಾಜಕೀಯ ಹೋರಾಟಗಳಿಂದಾಗಿಯೇ ಗೋರಟಾ ಇಂದಿಗೂ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಇದರ ಇತಿಹಾಸವನ್ನು ರಾಜಕೀಯಕ್ಕೆ ಬಳಸಿಕೊಂಡರೂ ಗ್ರಾಮದ ಪಾಲಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಭಗವಂತ ಖೂಬಾ ಚುನಾಯಿತರಾಗಿ ಗೋರಟಾ ಗ್ರಾಮವನ್ನು ದತ್ತು ಪಡೆದು ‘ಆದರ್ಶ ಗ್ರಾಮ’ವನ್ನಾಗಿ ರೂಪಿಸುವ ಘೋಷಣೆ ಮಾಡಿದ್ದರು. ಐದು ವರ್ಷ ಮುಗಿದರೂ ಆದರ್ಶ ಗ್ರಾಮದ ಪರಿಕಲ್ಪನೆ ಸಾಕಾರಗೊಳ್ಳಲಿಲ್ಲ. ಮೋದಿ ಅವರ ಘೋಷಣೆ ಕಡತಗಳಲ್ಲೇ ಉಳಿದುಕೊಂಡಿದೆ.

‘ಸಂಸದರು ಕಳೆದ ಅವಧಿಯಲ್ಲಿ ಸುಮಾರು ಮೂರು ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಸಂಸದರು ದತ್ತು ಪಡೆದಿದ್ದಕ್ಕೆ ಬಸವಕಲ್ಯಾಣದ ಹಿಂದಿನ ಶಾಸಕರು ಗೋರಟಾ ಅಭಿವೃದ್ಧಿಗೆ ಆಸಕ್ತಿ ತೋರಿಸಲಿಲ್ಲ. ರಾಜಕೀಯ ಕಾರಣಗಳಿಂದಾಗಿ ಐದು ವರ್ಷಗಳಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ.

ADVERTISEMENT

ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುವ ದಿಸೆಯಲ್ಲಿ ಆದರ್ಶ ಗ್ರಾಮ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ, ಅದಕ್ಕಾಗಿ ಪ್ರತ್ಯೇಕ ಅನುದಾನ ಒದಗಿಸದಿರುವುದು ಯೋಜನೆ ವಿಫಲಗೊಳ್ಳಲು ಕಾರಣವಾಗಿದೆ ಎಂದು ರಾಜಕೀಯ ಮುಖಂಡರು ಹೇಳುತ್ತಾರೆ.

‘ಸಂಸದರು ಆದರ್ಶ ಗ್ರಾಮ ಎಂದು ಘೋಷಣೆ ಮಾಡಿದ್ದೇ ಗೋರಟಾ ಗ್ರಾಮಕ್ಕೆ ಶಾಪವಾಗಿ ಪರಿಣಮಿಸಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸಂಸದರು ಅನುದಾನ ಬಿಡುಗಡೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸಂಸದರು ಅನುದಾನ ಕೊಡಲು ಸಿದ್ಧರಿಲ್ಲ’ ಎಂದು ಗ್ರಾಮದ ಮುಖಂಡ ಬಸವರಾಜ ಪೊಲೀಸ್‌ಪಾಟೀಲ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಗ್ರಾಮದ ಪಾಲಿಗೆ ಜನಪ್ರತಿನಿಧಿಗಳೇ ಇಲ್ಲವಾಗಿದ್ದಾರೆ. ಬೆಂಗಳೂರಿನವರು ಇಲ್ಲಿಗೆ ಬಂದು ಸ್ಮಾರಕ ಅಭಿವೃದ್ಧಿ ಮಾಡಲು ಮುಂದೆ ಬಂದರೂ ಅವರಿಗೆ ಜಿಲ್ಲೆಯ ಮುಖಂಡರು ಸಹಕಾರ ನೀಡುತ್ತಿಲ್ಲ. ಇದೇ ಕಾರಣಕ್ಕೆ ಗ್ರಾಮ ಆದರ್ಶವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮುಖಂಡರ ಸ್ವಾರ್ಥ ರಾಜಕಾರಣದಿಂದಾಗಿ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಬಿಜೆಪಿ ಮುಖಂಡರು ಗೋರಟಾ ಗ್ರಾಮವನ್ನು ನಾಟಕ ಮಾಡುವ ವೇದಿಕೆಯಂತೆ ಬಳಸಿಕೊಂಡಿದ್ದಾರೆ. ಸೆಪ್ಟೆಂಬರ್ 17ರಂದು ಇಲ್ಲಿಗೆ ಬಂದು ಧ್ವಜ ಹಾರಿಸಿ ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಮುಖಂಡರಿಗೆ ಯಾವುದೇ ಆಸಕ್ತಿ ಇಲ್ಲ’ ಎಂದು ಆರೋಪಿಸುತ್ತಾರೆ.

‘ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಗೋರಟಾ ಗ್ರಾಮವನ್ನು ಬಳಸಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅವರಿಗೆ ಅಭಿವೃದ್ಧಿಯೇ ಬೇಕಾಗಿಲ್ಲ. ಐದು ವರ್ಷಗಳ ಅವಧಿಯಲ್ಲಿ ಗ್ರಾಮದಲ್ಲಿ ಹೇಳಿಕೊಳ್ಳುವಂತಹದ್ದು ಏನೂ ಆಗಿಲ್ಲ’ ಎಂದು ನಿವೃತ್ತ ಶಿಕ್ಷಕ ಸುಭಾಷ ಪತಂಗೆ ಅಸಮಾಧಾನ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.