ADVERTISEMENT

ಗೋಶಾಲೆ ವಾರ್ಷಿಕೋತ್ಸವ ನಾಳೆ

ವರ್ಷ ಕಳೆದರೂ ನಯಾ ಪೈಸೆ ನೆರವು ನೀಡದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:07 IST
Last Updated 24 ಜನವರಿ 2021, 17:07 IST
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯಲ್ಲಿ ಗೋವುಗಳ ಮೈಸವರಿದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರು
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯಲ್ಲಿ ಗೋವುಗಳ ಮೈಸವರಿದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರು   

ಬೀದರ್: ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ವಾರ್ಷಿಕೋತ್ಸವ ಹಾಗೂ ‘ಗೋ ರಥ ಗೋ ಸೇವೆ’ ಸಮರ್ಪಣೆ ಕಾರ್ಯಕ್ರಮ ಜ.26ರಂದು ಬೆಳಿಗ್ಗೆ 11ಕ್ಕೆ ಆಶ್ರಮದ ಆವರಣದಲ್ಲಿ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು.

ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಉದ್ಘಾಟಿಸುವರು ಎಂದು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪುರ, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ವಿಜಯಸಿಂಗ್ ಡಾ.ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ, ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್. .ನಾಗೇಶ, ಜಿಲ್ಲಾ ಪಂಚಾಯಿತಿ ಸಿಇಒ
ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಗೋಪಾಲ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಭಾಗವಹಿಸುವರು. ಹಿರಿಯ ಉದ್ಯಮಿ ಗುರುನಾಥ ಕೊಳ್ಳೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಗೋಶಾಲೆ ಪ್ರಗತಿಗೆ ಕೈಜೋಡಿಸಿದ ಗೋ ಸೇವಕರನ್ನು ಸನ್ಮಾನಿಸಲಾಗುವುದು. ಆತ್ಮನಿರ್ಭರದ ಕನಸು ಸಾಕಾರಕ್ಕೆ ಗೋ ಆಧರಿತ ಕೃಷಿಯೇ ಮೂಲ ಆಧಾರ. ಈ ನಿಟ್ಟಿನಲ್ಲಿ ಅಂದಿನ ಕಾರ್ಯಕ್ರಮದಲ್ಲಿ ಚಿಂತನ, ಮಂಥನ ನಡೆಯಲಿದೆ ಎಂದು ತಿಳಿಸಿದರು.

‘ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಕಳೆದ ವರ್ಷ ಗೋಶಾಲೆಗೆ ₹ 15 ಲಕ್ಷ ಅನುದಾನ ಘೋಷಣೆ ಮಾಡಿದರೂ ಸರ್ಕಾರ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡುವ ವಿಶ್ವಾಸ ಇದೆ’ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕದ ಮಾದರಿ ಗೋಶಾಲೆ ನಿರ್ಮಿಸುವ ಉದ್ದೇಶದಿಂದ ರಾಜ್ಯ ಸರ್ಕಾರಕ್ಕೆ 50 ಎಕರೆ ಜಾಗ ಕೇಳಲಾಗಿದೆ. ಸರ್ಕಾರ ನೆರವು ಕಲ್ಪಿಸಿದರೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಎರಡು ಗೋವುಗಳಿಂದ ಆರಂಭವಾಗಿರುವ ಗೋ ಶಾಲೆಯಲ್ಲಿ ಇಂದು 100ಕ್ಕೂ ಹೆಚ್ಚು ಗೋವುಗಳಿವೆ. ಗಿರ್, ದೇವಣಿ, ಕಾಂಕ್ರೇಜ್‌ ತಳಿಗಳು ಇಲ್ಲಿವೆ. ದೇಸಿ ತಳಿಗಳ ಸಂರಕ್ಷಣೆ, ಸಂವರ್ಧನೆ ನಮ್ಮ ಉದ್ದೇಶವಾಗಿದೆ. ಗೋಶಾಲೆ ನಡೆಸುವುದು ಕಷ್ಟದ ಕೆಲಸ.ಭಕ್ತರ ಹಾಗೂ ದಾನಿಗಳ ನೆರವಿನಿಂದ ನಡೆದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.