ADVERTISEMENT

ಕನ್ನಡ ಮಾಯ ಮಾಡುತ್ತಿಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 14:38 IST
Last Updated 5 ಫೆಬ್ರುವರಿ 2019, 14:38 IST
ಬಂಡೆಪ್ಪ ಕಾಶೆಂಪೂರ
ಬಂಡೆಪ್ಪ ಕಾಶೆಂಪೂರ   

ಬೀದರ್: ‘ರಾಜ್ಯ ಸರ್ಕಾರ, ಕನ್ನಡ ಶಾಲೆಯಲ್ಲಿ ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ಬೋಧಿಸಲು ತೀರ್ಮಾನಿಸಿದೆ. ಶಾಲೆಗಳಲ್ಲಿನ ಕನ್ನಡ ಮಾಯ ಮಾಡುತ್ತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಸ್ಪಷ್ಟಪಡಿಸಿದರು.

‘ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸರ್ಕಾರ ರಾಜ್ಯದಲ್ಲಿ ಇಂಗ್ಲಿಷ್‌ ಶಾಲೆಗಳನ್ನು ತೆರೆಯಲು ಉದ್ದೇಶಿಸಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಕನ್ನಡ ಶಾಲೆಯ ಅನುಮತಿ ಪಡೆದು ಇಂಗ್ಲಿಷ್‌ ಬೋಧನೆ ಮಾಡುತ್ತಿರುವ ಶಾಲೆಗಳೂ ರಾಜ್ಯದಲ್ಲಿವೆ. ಬೀದರ್‌ ಜಿಲ್ಲೆಯಲ್ಲಿ ಶೇಕಡ 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳು ಅಧಿಕ ಇವೆ. ಕನ್ನಡ ಶಾಲೆಗಳನ್ನು ಉಳಿಸುವ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಬೀದರ್‌ ಕನ್ನಡ ರಾಜ್ಯದಲ್ಲೇ ವಿಶಿಷ್ಠವಾದದ್ದಾಗಿದೆ. ಇಲ್ಲಿ ಕನ್ನಡದೊಂದಿಗೆ ಹಳೆಗನ್ನಡ, ಮರಾಠಿ, ತೆಲುಗು, ಉರ್ದು ಸೇರಿಕೊಂಡಿವೆ. ಹೊರ ಜಿಲ್ಲೆಯವರಿಗೆ ಇಲ್ಲಿಯ ಭಾಷೆ ಸುಲಭವಾಗಿ ಅರ್ಥವಾಗದು. ಇದು ಬಹು ಸಂಸ್ಕೃತಿಯನ್ನು ಬಿಂಬಿಸುವ ಭಾಷೆಯಾಗಿದೆ’ ಎಂದರು.

***

ಕನ್ನಡ ಭವನಕ್ಕೆ ₹ 1 ಕೋಟಿ
ಬೀದರ್: ‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಕನ್ನಡ ಭವನಕ್ಕೆ ಜೋಳಿಗೆ ಹಿಡಿಯುವ ಅಗತ್ಯವಿಲ್ಲ. ಸರ್ಕಾರ ಬಜೆಟ್‌ನಲ್ಲಿ ₹ 1 ಕೋಟಿ ಒದಗಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಭರವಸೆ ನೀಡಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಏನಾಗಿದೆ ನನಗೆ ಗೊತ್ತಿಲ್ಲ. ಆದರೆ, ಈಗಿನ ಕಸಾಪ ಪದಾಧಿಕಾರಿಗಳು ಅನೇಕ ಬಾರಿ ನನ್ನನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಿದ್ದಾರೆ. ಕನ್ನಡ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

****
ಗಾಣದ ಉಂಡಿಗೆ ಬ್ರ್ಯಾಂಡ್‌
‘ಜಿಲ್ಲೆಯ ವಿಶಿಷ್ಟ ಖಾದ್ಯ ದುಬಲಗುಂಡಿಯ ‘ಗಾಣದ ಉಂಡಿ’ಗೆ ಬ್ರ್ಯಾಂಡ್‌ ಮಾಡುವ ಉದ್ದೇಶದಿಂದ ಒಂದು ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಉಂಡಿಯನ್ನು ಮೂರು ವಿಧಗಳಲ್ಲಿ ರಚಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

‘ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಇಲ್ಲಿನ ಉಂಡಿಯನ್ನು ಖರೀದಿಸಿ ತಮ್ಮ ಊರಿಗೆ ಒಯ್ಯುವಂತೆ ಆಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.