ಕಮಲನಗರ: ಕೋರಿಯಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಗೊಣಿಬಸಪ್ಪ ಜೋಗೇರ ಅವರು ತಮ್ಮ ಮದುವೆಯಲ್ಲಿ ಉಡುಗೊರೆಯಾಗಿ ಬಂದ ನಗದು ಹಾಗೂ ಇತರರ ನೆರವಿನಿಂದ ಶಾಲೆಯ ಕೊಠಡಿಗಳಿಗೆ ಬಣ್ಣ ಬಳಸಿ ಮಾದರಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಸಾಥ್ ನೀಡಿದ್ದಾರೆ.
ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರವಿರುವ ಕೋರಿಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಹಳ ವರ್ಷಗಳಿಂದ ಸುಣ್ಣ–ಬಣ್ಣ ಕಾಣದೆ ಸೊರಗಿತ್ತು. ಎರಡು ಕೊಠಡಿಗಳಿಗೆ ಬಣ್ಣ ಬಳಸಿ ಶಾಲಾ ಕಟ್ಟಡ ಮಿಂಚುವಂತೆ ಮಾಡಿದ್ದಾರೆ. ಅಲ್ಲದೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕೂಡ ಎರಡು ಕಟ್ಟಡಕ್ಕೆ ಸ್ವಂತ ಹಣ ಕೊಟ್ಟು ಸುಣ್ಣ–ಬಣ್ಣ ಮಾಡಿಸಿ ಶಾಲೆ ಅಂದಗಾಣಿಸಲು ಸಾಥ್ ನೀಡಿದ್ದಾರೆ.
ಪ್ರಭಾರ ಮುಖ್ಯಶಿಕ್ಷಕ ಗೊಣಿಬಸಪ್ಪ ಜೋಗೇರ ತಮ್ಮ ಮದುವೆಯಲ್ಲಿ ಬಂದ ₹12 ಸಾವಿರ ಉಡುಗೊರೆ ಹಾಗೂ ಬಸವರಾಜ ಪಾಟೀಲ ಬಸನಾಳ ಅವರ ₹9 ಸಾವಿರ ಸೇರಿ ಒಟ್ಟು ₹21 ಸಾವಿರ ವೆಚ್ಚದಲ್ಲಿ ಶಾಲೆಗೆ ಬಣ್ಣ ಮಾಡಿಸಿದ್ದಾರೆ. ಶಾಲಾ ಆವರಣದಲ್ಲಿ ಹೂವಿನ ಗಿಡಗಳು ಹಾಗೂ ಇತರ ಸಸ್ಯ ಸಂಕುಲ ಬೆಳೆಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ.
‘ಮುಖ್ಯಶಿಕ್ಷಕ ಗೊಣಿಬಸಪ್ಪ ಜೋಗೇರ ಹಾಗೂ ಬಸವರಾಜ ಪಾಟೀಲ ಬಸನಾಳ ಅವರಂಥ ಶಿಕ್ಷಕರಿಂದ ಸರ್ಕಾರಿ ಶಾಲೆಗಳಿಗೆ ಉತ್ತಮ ಭವಿಷ್ಯವಿದೆ. ಕೈಯಿಂದ ಹಣ ಹಾಕಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಸಿದ್ದಲ್ಲದೆ ಪಾಲಕರ ಮನವೊಲಿಸಿ ಮಕ್ಕಳ ದಾಖಲಾತಿ ಕೂಡ ಹೆಚ್ಚಿಸಿದ್ದಾರೆ’ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯ ಬಣ್ಣಕ್ಕೆ ಸ್ವಂತ ಉಡುಗೊರೆ ಹಣ ಶಿಕ್ಷಕರ ಸಂಘದ ಅಧ್ಯಕ್ಷ ಸಾಥ್ ಶಾಲಾ ಆವರಣದಲ್ಲಿ ಹಸಿರು ಬೆಳೆಸಲೂ ಪ್ರಯತ್ನ
ಮುಖ್ಯಶಿಕ್ಷಕರು ಇನ್ನೊಬ್ಬರ ನೆರವು ಪಡೆದು ನಾಲ್ಕು ಕೋಣೆಗಳಿಗೆ ಬಣ್ಣ ಬಳಿಸಿ ಶಾಲೆಯ ಅಂದ ಹೆಚ್ಚಿಸಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ನೀಡುತ್ತಿದ್ದಾರೆತುಕಾರಾಮ ಕಟಾರೆ ಎಸ್‌ಡಿಎಂಸಿ ಅಧ್ಯಕ್ಷ ಕೋರಿಯಾಳ
ಪ್ರಭಾರ ಮುಖ್ಯಶಿಕ್ಷಕರ ಶ್ರಮ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಸಹಕಾರದಿಂದ ಶಾಲೆ ಅಂದವಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಬಾಲಾಜಿ ಗವಳಿ ಸಿಆರ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.