ADVERTISEMENT

ಚಟ್ನಳ್ಳಿ ಗ್ರಾ.ಪಂ: ಅಧ್ಯಕ್ಷ ಸೇರಿ ಏಳು ಮಂದಿ ಸದಸ್ಯತ್ವ ರದ್ದು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 15:36 IST
Last Updated 18 ನವೆಂಬರ್ 2019, 15:36 IST

ಜನವಾಡ: ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಏಳು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

ಅಧ್ಯಕ್ಷ ಅಮರ ಸಂಗ್ರಾಮಪ್ಪ, ಉಪಾಧ್ಯಕ್ಷೆ ಮುತ್ತಮ್ಮ ಅರ್ಜುನ, ವಿಠ್ಠಲ ವೀರಣ್ಣ, ಇಸ್ಮಾಯಿಲ್ ಮೈನೊದ್ದಿನ್, ಜಗನ್ನಾಥ ಶಿವರಾಜ, ರಿಜ್ವಾನ್ ಬೇಗಂ ಮತಿನ್, ಹಾಗೂ ಅಶೋಕ ಬಕ್ಕಪ್ಪ ಸದಸ್ಯತ್ವ ರದ್ದುಗೊಂಡವರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ಹಾಗೂ 48(4) ರಡಿಯಲ್ಲಿ ಸದಸ್ಯತ್ವ ರದ್ದುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ (ಗ್ರಾಪಂ)(ಪ್ರ) ಉಪ ನಿರ್ದೇಶಕ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ನಾರಾಯಣ ಡಿ.ಜಿ. ಆದೇಶ ಹೊರಡಿಸಿದ್ದಾರೆ.

ADVERTISEMENT

ನಿಯಮಬಾಹಿರವಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಮಂಜೂರು ಮಾಡಿಕೊಂಡು, ಮನೆ ನಿರ್ಮಿಸದೆ ಸರ್ಕಾರದ ಪ್ರೋತ್ಸಾಹ ಧನ ಪಡೆದ, ಮನೆಯಲ್ಲಿ ಶೌಚಾಲಯ ಹೊಂದಿರದ ಹಾಗೂ ಸಾಮಾನ್ಯ ಸಭೆಗೆ ಸತತ ಗೈರು ಹಾಜರಾದ ಆರೋಪಗಳು ಸಾಬೀತಾದ ಪ್ರಯುಕ್ತ ಸದಸ್ಯತ್ವ ರದ್ದುಪಡಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993 ರ ಪ್ರಕರಣ 157(2) ಮತ್ತು 246(8) ರ ಅಡಿ ದುರುಪಯೋಗ ಪಡೆಸಿಕೊಂಡಿರುವ ಮೊತ್ತದ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಹಣ ವಸೂಲಿ ಮಾಡಲು ಸರ್ಕಾರ ನಿರ್ಣಯಿಸಿದೆ ಎಂದು ತಿಳಿಸಲಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಅವರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಐವರು ಸದಸ್ಯರು ಕಾನೂನು ಬಾಹಿರವಾಗಿ ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರು ಮಾಡಿಕೊಂಡು, ಮನೆ ನಿರ್ಮಿಸದೆ, ಸರ್ಕಾರದ ಪ್ರೋತ್ಸಾಹಧನ ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.