ADVERTISEMENT

ಔರಾದ್:‌ ಗುಂಪು ಘರ್ಷಣೆ– 6 ಜನರಿಗೆ ಗಾಯ, ಉದ್ವಿಗ್ನ ಪರಿಸ್ಥಿತಿ

ಹಸು ಸಾಗಾಟ ವಿಚಾರಕ್ಕೆ ಗುಂಪು ಘರ್ಷಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 21:23 IST
Last Updated 21 ಆಗಸ್ಟ್ 2023, 21:23 IST
ಔರಾದ್ ಪಟ್ಟಣದಲ್ಲಿ ಸೋಮವಾರ ಗುಂಪು ಘರ್ಷಣೆ ನಡೆದ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು
ಔರಾದ್ ಪಟ್ಟಣದಲ್ಲಿ ಸೋಮವಾರ ಗುಂಪು ಘರ್ಷಣೆ ನಡೆದ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು   

ಔರಾದ್ (ಬೀದರ್‌ ಜಿಲ್ಲೆ): ಪಟ್ಟಣದಲ್ಲಿ ಸೋಮವಾರ ಹಸು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಟೆಂಪೊ ಚಾಲಕ ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಚಾಲಕ ಮುಜೀಬ್, ಖರೀದಿದಾರ ಅಬ್ದುಲ್ ಸಲೀಂ, ಬಸವಕುಮಾರ ಚೌಕನಪಳ್ಳೆ, ವಿಶಾಲ, ಪ್ರೇಮ ರಾಠೋಡ್ ಸೇರಿ ಆರು ಜನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ.

ಘಟನೆ ವಿವರ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ವಾರದಂತೆ ಸೋಮವಾರವೂ ಜಾನುವಾರು ವಹಿವಾಟು ನಡೆಯುತ್ತಿತ್ತು. ಟೆಂಪೊದಲ್ಲಿ ಹತ್ತು ಹಸುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಸ್ಥಳ್ಕಕೆ ಬಂದ ಶ್ರೀರಾಮಸೇನೆಯ ಹತ್ತು ಕಾರ್ಯಕರ್ತರು ಟೆಂಪೊ ತಡೆದು, ‘ಹಸುಗಳನ್ನು ಅನಧಿಕೃತವಾಗಿ ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದೀರಿ’ ಎಂದು ತಕರಾರು ತೆಗೆದು ಟೆಂಪೊ ಚಾಲಕ ಮುಜೀಬ್‌ ಹಾಗೂ ಖರೀದಿದಾರ ಅಬ್ದುಲ್‌ ಮೇಲೆ ಹಲ್ಲೆ ನಡೆಸಿದರು.

ADVERTISEMENT

ವಿಷಯ ತಿಳಿದು ಮುಸ್ಲಿಂ ಯುವಕರ ಗುಂಪು ಸ್ಥಳಕ್ಕೆ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. 

 ಘಟನೆ ಸಂಬಂಧ ದೂರು–ಪ್ರತಿ ದೂರು ಬಂದಿದ್ದು, ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.