ADVERTISEMENT

‘ಗ್ಯಾರಂಟಿ’ ತಪ್ಪು ಕಲ್ಪನೆಗೆ ಅವಕಾಶ ಬೇಡ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:56 IST
Last Updated 18 ಜುಲೈ 2024, 15:56 IST
ಔರಾದ್ ತಾಲ್ಲೂಕು ಪಂಚಾಯಿತಿನಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಚನ್ನಪ್ಪ ಉಪ್ಪೆ, ಉಪಾಧ್ಯಕ್ಷ ಬಾಬಾಸಾಹೇಬ ಜಾಧವ್, ತಾ.ಪಂ. ಇಒ ಬೀರೇಂದ್ರಸಿಂಗ್ ಠಾಕೂರ್ ಇದ್ದರು
ಔರಾದ್ ತಾಲ್ಲೂಕು ಪಂಚಾಯಿತಿನಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಚನ್ನಪ್ಪ ಉಪ್ಪೆ, ಉಪಾಧ್ಯಕ್ಷ ಬಾಬಾಸಾಹೇಬ ಜಾಧವ್, ತಾ.ಪಂ. ಇಒ ಬೀರೇಂದ್ರಸಿಂಗ್ ಠಾಕೂರ್ ಇದ್ದರು   

ಔರಾದ್: ‘ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ, ತಪ್ಪು ಸಂದೇಶ ಹರಡದಂತೆ ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಲಹೆ ನೀಡಿದೆ.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯ ಸಲ್ಲಾವುದ್ದಿನ್ ಮಾತನಾಡಿ ‘ಜಮಗಿ ಗಡಿ ಭಾಗದಲ್ಲಿ ಪದೇಪದೇ ವಿದ್ಯುತ್ ಕಡಿತ ಆಗುತ್ತಿದೆ. ಇದರಿಂದ ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ತಪ್ಪು ಸಂದೇಶ ಹೋಗುತ್ತಿದೆ. ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಉಚಿತ ವಿದ್ಯುತ್ ಕಲ್ಪಿಸಲು ತಾಲ್ಲೂಕಿಗೆ ₹11.58 ಕೋಟಿ ಅನುದಾನ ಬಂದಿದೆ. 21,102 ಗ್ರಾಹಕರು ಯೋಜನೆಯ ಪೂರ್ಣ (ಶೂನ್ಯ ಮೊತ್ತದ ಬಿಲ್) ಲಾಭ ಪಡೆದಿದ್ದಾರೆ. ಕೆಲ ಕಡೆ ವಿದ್ಯುತ್ ಕಡಿತ ಆಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲ ಲೈನ್‌ಮನ್‌ಗಳ ಮೇಲೆ ದೂರುಗಳಿವೆ. ಅಂಥವರನ್ನು ಬದಲಿಸಲಾಗುವುದು’ ಎಂದು ಜೆಸ್ಕಾಂ ಎಇಇ ರವಿ ಕಾರಬಾರಿ ಹೇಳಿದರು.

ADVERTISEMENT

ಪಡಿತರ ಚೀಟಿ ಆನ್‌ಲೈನ್ ನೋಂದಣಿ ಖಾಸಗಿ ಬದಲು ಸರ್ಕಾರವೇ ನೋಡಿಕೊಳ್ಳಬೇಕು. ಇದರಿಂದಾಗಿ ಹಣ ವಸೂಲಿ ನಿಲ್ಲುತ್ತದೆ. ಗಡಿ ಭಾಗದಲ್ಲಿ ಬಸ್ ಕೊರತೆ ನೀಗಿಸುವಂತೆ ಅನೇಕ ಸದಸ್ಯರು ಸಭೆಯ ಗಮನಕ್ಕೆ ತಂದರು.

‘ಮಧ್ಯಾಹ್ನ ವೇಳೆ ಹೊರಡುವ ಚಿಕ್ಲಿ-ಉದಗಿರ್ ಬಸ್ ಸೇವೆ ಸ್ಥಗಿತವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ’ ಎಂದು ಅನುಷ್ಠಾನ ಸಮಿತಿ ಸದಸ್ಯ ಡಿ.ಕೆ. ಚಂದು ಹೇಳಿದರು. ಶಕ್ತಿ ಯೋಜನೆ ಜಾರಿಯಾದರೂ ನಮ್ಮಲ್ಲಿ ಬಸ್ ಕೊರತೆ ಇಲ್ಲ. ಕೆಲ ಕಡೆ ಆಗಿರುವ ಕೊರತೆ ಸರಿಪಡಿಸುವುದಾಗಿ’ ಘಟಕ ವ್ಯವಸ್ಥಾಪಕ ಪಿ.ಎಸ್. ರಾಠೋಡ್ ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಎಲ್ಲ ಐದು ಗ್ಯಾರಂಟಿ ಜಾರಿಗೆ ತಂದಿದೆ. ಈ ಯೋಜನೆ ಸಮರ್ಪಕವಾಗಿ ಜಾರಿಗೆ ತರುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚನ್ನಪ್ಪ ಉಪ್ಪೆ ಹೇಳಿದರು.

‘ಗ್ಯಾರಂಟಿ ಯೋಜನೆಯಿಂದ ದೂರು ಉಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆ ವ್ಯಾಪ್ತಿಗೆ ತರಬೇಕು. ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತಿ ಇಒ ಅವರು ಮೇಲ್ವಿಚಾರಣೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಾಬಾಸಾಹೇಬ್ ಜಾಧವ್, ಸದಸ್ಯ ಅರವಿಂದ ಹರಿ, ಕೃಷ್ಣಾ ಯನಗುಂದಾ, ರಾಜಕುಮಾರ ಕಂದಗೂಳ, ಸಂಜುಕುಮಾರ ವಗ್ಗೆ, ಶಂಕರ ಪಾಟೀಲ, ಚನ್ನಬಸಪ್ಪ ಬಿರಾದಾರ ಕೌಠಾ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.