ADVERTISEMENT

ಸಂಭ್ರಮೋಲ್ಲಾಸದ ಗುರುನಾನಕ ದೇವ ಜಯಂತಿ

ಮೊಳಗಿದ ‘ವಾಹೆ ಗುರು ಕಾ ಖಾಲ್ಸಾ’, ‘ವಾಹೆ ಗುರು ಕಾ ಫತೇಹ್‌’ ಜಯಘೋಷ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:51 IST
Last Updated 6 ನವೆಂಬರ್ 2025, 5:51 IST
ಗುರುದ್ವಾರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು
ಗುರುದ್ವಾರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು   

ಬೀದರ್‌: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ ದೇವ ಅವರ 556ನೇ ಜಯಂತಿಯನ್ನು ನಗರದಲ್ಲಿ ಶನಿವಾರ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.

ದಿನವಿಡೀ ನಗರದ ಗುರುನಾನಕ ಝೀರಾದಲ್ಲಿ (ಗುರುದ್ವಾರ) ಜಾತ್ರೆಯ ವಾತಾವರಣ ಇತ್ತು. ದೇಶದ ವಿವಿಧ ಭಾಗಗಳಿಂದ ಸಿಖ್‌ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದರು. ಅನ್ಯ ಧರ್ಮೀಯರು, ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಧಾರ್ಮಿಕ ಕಾರ್ಯಗಳನ್ನು ಕಣ್ತುಂಬಿಕೊಂಡರು.

ಬುಧವಾರ ಬೆಳಿಗ್ಗೆ ಗುರುದ್ವಾರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಆನಂತರ ಗುರುಗ್ರಂಥ ಸಾಹಿಬ್‌ ಪಠಣ ಜರುಗಿತು. ಕೀರ್ತನೆ, ಪ್ರವಚನ ಕಾರ್ಯಕ್ರಮಗಳು ನಡೆದವು. ಭಕ್ತರು ಸರತಿ ಸಾಲಲ್ಲಿ ಹೋಗಿ ಗುರುಗ್ರಂಥ ಸಾಹೀಬ್‌ ದರ್ಶನ ಪಡೆದರು.

ADVERTISEMENT

ಸಂಸದ ಸಾಗರ ಖಂಡ್ರೆ, ಗುರುದ್ವಾರ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್‌ ಬಲಬೀರ್‌ ಸಿಂಗ್‌, ಸದಸ್ಯರಾದ ಮನಪ್ರೀತ್‌ ಸಿಂಗ್‌, ಜಸ್ಪ್ರೀತ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಸಹ ಭೇಟಿ ನೀಡಿದರು. ಜಯಂತಿ ಅಂಗವಾಗಿ ಇಡೀ ಗುರುದ್ವಾರ ಹಾಗೂ ಅದರ ಪರಿಸರವನ್ನು ತಳಿರು ತೋರಣ, ಹೂಗಳಿಂದ ಸಿಂಗರಿಸಿ, ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಲಂಗರ್‌ನಲ್ಲಿ ನಿರಂತರ ದಾಸೋಹ: ಗುರುದ್ವಾರದಲ್ಲಿರುವ ಲಂಗರ್‌ನಲ್ಲಿ (ದಾಸೋಹ ಮನೆ) ವರ್ಷದ ಎಲ್ಲಾ ದಿನಗಳಲ್ಲೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಆದರೆ, ನಿರ್ದಿಷ್ಟ ಸಮಯದಲ್ಲಿ ಅದು ಕೆಲಸ ನಿರ್ವಹಿಸುತ್ತದೆ. ಆದರೆ, ಗುರುನಾನಕ ದೇವ ಅವರ ಜಯಂತಿ ಸಂದರ್ಭದಲ್ಲಿ ಹಗಲು–ರಾತ್ರಿ ದಾಸೋಹ ಸೇವೆ ನಡೆಯುತ್ತದೆ.

ಜಯಂತಿಗೆ ವಿಶೇಷ ಖಾದ್ಯ ತಯಾರಿಸಿ ಉಣಬಡಿಸುತ್ತಾರೆ. ವಿವಿಧ ಕಡೆಗಳಿಂದ ಬಂದಿದ್ದ ಜನ ಗುರುಗ್ರಂಥ ಸಾಹೀಬ್‌ ದರ್ಶನ ಪಡೆದು, ಲಂಗರ್‌ನಲ್ಲಿ ಪ್ರಸಾದ ಸವಿದರು.

ಭಕ್ತರು ‘ಗುರುಗ್ರಂಥ ಸಾಹೀಬ್‌’ ದರ್ಶನ ಪಡೆದರು
ಗುರುದ್ವಾರದ ಪರಿಸರದಲ್ಲಿರುವ ಸ್ನಾನಕೊಳದಲ್ಲಿ ಭಕ್ತರು ಮಿಂದೆದ್ದರು
ಗುರುದ್ವಾರದಲ್ಲಿ ಸೆಲ್ಫಿ ತೆಗೆದುಕೊಂಡ ಭಕ್ತರು
ಗುರುದ್ವಾರದಲ್ಲಿ ಬುಧವಾರ ಗುರುಗ್ರಂಥ ಸಾಹೀಬ್‌ ಪಠಣ ನಡೆಯಿತು
ಮೆರವಣಿಗೆಯಲ್ಲಿ ಚಿಣ್ಣರು ಒಂದೇ ದಿರಿಸಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿ ಗಮನ ಸೆಳೆದರು
ಮೆರವಣಿಗೆಯಲ್ಲಿ ಗಮನ ಸೆಳೆದ ಕತ್ತಿ ವರಸೆ ಪ್ರದರ್ಶನ
ಮೆರವಣಿಗೆಯಲ್ಲಿ ಧಾರ್ಮಿಕ ಧ್ವಜಗಳೊಂದಿಗೆ ಹೆಜ್ಜೆ ಹಾಕಿದ ಸಿಖ್ಖರು
ಮೆರವಣಿಗೆಯಲ್ಲಿ ಕತ್ತಿ ಹಿಡಿದು ಹೆಜ್ಜೆ ಹಾಕಿದ ಸಿಖ್ಖರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಮೆರವಣಿಗೆಯಲ್ಲಿ ನೂರಾರು ಜನ ಕತ್ತಿ ಝಳಪಿಸುತ್ತ ಹೆಜ್ಜೆ ಹಾಕಿದರು

Cut-off box - ಕತ್ತಿ ಝಳಪಿಸಿ ರೋಮಾಂಚನ ಗುರುನಾನಕ ದೇವ ಅವರ ಜಯಂತಿ ಅಂಗವಾಗಿ ಬುಧವಾರ ಸಂಜೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಗುರುದ್ವಾರದಿಂದ ಡಾ.ಬಿ.ಆರ್‌. ಅಂಬೇಡ್ಕರ್‌– ವೃತ್ತದ ವರೆಗೆ ಮೆರವಣಿಗೆ ನಡೆಯಿತು. ನ್ಯೂಟೌನ್‌ ಪೊಲೀಸ್‌ ಠಾಣೆ ಮಾರ್ಗವಾಗಿ ನಾಂದೇಡ್‌–ಹೈದರಾಬಾದ್‌ ಮುಖ್ಯರಸ್ತೆ ಮೂಲಕ ಮಡಿವಾಳ ವೃತ್ತ ರೋಟರಿ ವೃತ್ತ ನೆಹರೂ ಕ್ರೀಡಾಂಗಣ ಸಾಯಿ ಶಾಲೆ ಮೈದಾನದಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ತಲುಪಿತು. ಅಲ್ಲಿಂದ ಪುನಃ ಮೆರವಣಿಗೆಯು ಹರಳಯ್ಯ ವೃತ್ತದ ಮಾರ್ಗವಾಗಿ ಗುರುದ್ವಾರದ ಕಡೆಗೆ ಮುಖ ಮಾಡಿತು. ನ್ಯೂಟೌನ್‌ ಪೊಲೀಸ್‌ ಠಾಣೆಯಿಂದ ಗುರುದ್ವಾರದ ಮುಖ್ಯ ಪ್ರವೇಶ ದ್ವಾರದ ವರೆಗೆ ಸಿಖ್‌ ಧರ್ಮೀಯರು ಕತ್ತಿ ಹಿಡಿದು ಓಡುವ ದೃಶ್ಯ ರೋಮಾಂಚನಕಾರಿಯಾಗಿತ್ತು. ಅನೇಕರು ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಮಧ್ಯಾಹ್ನವೇ ಅಲ್ಲಿ ಬಂದು ಸೇರಿದ್ದರು. ರಸ್ತೆಯ ಎರಡು ಇಕ್ಕೆಲಗಳು ಕಟ್ಟಡಗಳ ಮೇಲೆ ನಿಂತುಕೊಂಡು ಮೆರವಣಿಗೆ ವೀಕ್ಷಿಸಿದರು. ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದರು. ಮೆರವಣಿಗೆಯಲ್ಲಿ ನೂರಾರು ಜನ ಸಿಖ್‌ ಧರ್ಮೀಯರು ಪಾಲ್ಗೊಂಡಿದ್ದರು. ನೀಲಿ ಹಳದಿ ಬಣ್ಣದ ಧಾರ್ಮಿಕ ಧ್ವಜಗಳೊಂದಿಗೆ ಗುರುಗಳು ಪಾಲ್ಗೊಂಡಿದ್ದರು. ಅಲಂಕರಿಸಿದ ವಾಹನದಲ್ಲಿ ಗುರುಗ್ರಂಥ ಸಾಹಿಬ್‌ ಇರಿಸಿ ಪಠಣ ಮಾಡಿದರು. ನೂರಾರು ಜನ ಕತ್ತಿಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಕತ್ತಿ ವರಸೆ ಸಾಹಸ ಪ್ರದರ್ಶಿಸಿದರು. ‘ಜೋ ಬೋಲೇ ಸೋ ನಿಹಾಲ್‌’ ‘ವಾಹೆ ಗುರು ಕಾ ಖಾಲ್ಸಾ’ ‘ವಾಹೆ ಗುರು ಕಾ ಫತೇಹ್‌’ ‘ಸತ್‌ಶ್ರೀ ಅಕಾಲ್‌’ ಹೀಗೆ ಗುರುನಾನಕ ದೇವ ಹಾಗೂ ಸಿಖ್‌ ಧರ್ಮದ ಪರ ಜಯಘೋಷಗಳನ್ನು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.