ADVERTISEMENT

ಬೀದರ್: ವಿವಿಧೆಡೆ ಹಡಪದ ಅಪ್ಪಣ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:43 IST
Last Updated 13 ಜುಲೈ 2025, 4:43 IST
ಬೀದರ್‌ನ ಬಸವಗಿರಿಯಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ರಮೇಶ ಮಠಪತಿ ಮಾತನಾಡಿದರು
ಬೀದರ್‌ನ ಬಸವಗಿರಿಯಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ರಮೇಶ ಮಠಪತಿ ಮಾತನಾಡಿದರು   

ಬೀದರ್‌: ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಶರಣ ಉದ್ಯಾನದಲ್ಲಿ, ಲಿಂಗಾಯತ ಮಹಾಮಠದ ವತಿಯಿಂದ ಬಸವಗಿರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಹಾಗೂ ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಬಸವ ಸೇವಾ ಪ್ರತಿಷ್ಠಾನ: ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಮಾತನಾಡಿ, ಸಜ್ಜನರ ಸಂಗ ಇದ್ದಾಗ ಬದುಕು ಅರಳಿ ಬೆಳಕು ದೊರಕಿ ಅಜ್ಞಾನ ಕಡಿಮೆಯಾಗುತ್ತದೆ. ಇಂತಹ ಅಜ್ಞಾನ ಕಳೆಯುವಂತಹ ಕೆಲಸ ಮಾಡುವವರೇ ಗುರು, ನಮಗೆ ಶಿವಪಥದ ಮಾರ್ಗ ತೋರಿಸುವಂತಹ ವ್ಯಕ್ತಿ ಗುರು ಎಂದರು.

ಸಾಹಿತಿ ಅಮರನಾಥ ಸೋಲಪುರೆ ಮಾತನಾಡಿ, ಹಡಪದ ಅಪ್ಪಣ್ಣನವರು ವಿಶ್ವದ ಪ್ರಥಮ ಸಂಸತ್ತಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಕಾರ್ಯದರ್ಶಿಯಾಗಿ ಅವರಿಗೆ ಯಾವುದೇ ಮುಜುಗರವಾಗದಂತೆ ಕೆಲಸ ನಿರ್ವಹಿಸಿದರು. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು.

ADVERTISEMENT

ಕರಾಶಿ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಹತ್ತಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ರಮೇಶ ರಂಜಿರೇ ಉದ್ಘಾಟಿಸಿದರು. ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಂದನಹಳ್ಳಿ ಧ್ವಜಾರೋಣಗೈದರು. ರೋಟರಿ ಕ್ಲಬ್ ಫೋರ್ಟ್‌ ಅಧ್ಯಕ್ಷ ಡಾ. ಉಲ್ಲಾಸ ಕಟ್ಟಿಮನಿ, ರೋಟರಿ ಕ್ಲಬ್ ನ್ಯೂಸೆಂಚುರಿ ಅಧ್ಯಕ್ಷ ಡಾ. ನಾಗೇಶ ಪಾಟೀಲ, ರೋಟರಿ ಕ್ಲಬ್ ಕ್ವಿನ್ಸ್ ಅಧ್ಯಕ್ಷ ಡಾ. ಸುಲೋಚನಾ ಪಾಟೀಲ, ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದೀಶ್‌ ವಾಲಿ ಅವರನ್ನು ಸನ್ಮಾನಿಸಲಾಯಿತು. ಚಂದ್ರಕಾಂತ ಪಟ್ನೆ ವಚನ ಗಾಯನ ಮಾಡಿದರೆ, ರೇವಣಪ್ಪ ಮೂಲಗೆ, ಶ್ರೀನಿವಾಸ ಅಲ್ಮಾಸಪೂರ ವಚನ ಸಂಗೀತ ನಡೆಸಿಕೊಟ್ಟರು. ಮೀರಾ ಖೇಣಿ ಸ್ವಾಗತಿಸಿದರೆ, ಸಾವಿತ್ರಿ ಮಹಾಜನ ನಿರೂಪಿಸಿದರು. ಮೀರಾ ಗಿರೀಶ ಖೇಣಿ ಭಕ್ತಿ ದಾಸೋಹಗೈದರು.

ಲಿಂಗಾಯತ ಮಹಾಮಠ: ಹಡಪದ ಅಪ್ಪಣ್ಣನವರು ಕಲ್ಯಾಣ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 12ನೇ ಶತಮಾನದ ಪ್ರಮುಖ ಶರಣರಲ್ಲೊಬ್ಬರಾಗಿದ್ದ ಅಪ್ಪಣ್ಣನವರು ಬಸವಣ್ಣನವರ ಪರಮಾಪ್ತರಾಗಿದ್ದರು. ಬಸವಣ್ಣನವರ ಆರಂಭದಿಂದ ಕೊನೆವರೆಗೂ ಅವರ ಜತೆಗಿದ್ದರು. ಅನೇಕ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಸವಣ್ಣನವರಿಗೆ ನಿರಾಳತೆಯನ್ನಿತ್ತ ಮಹಾನುಭಾವರು ಎಂದು ರಮೇಶ ಮಠಪತಿ ಹೇಳಿದರು.

ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ ವಚನ ಪಠಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೇತೃತ್ವ ವಹಿಸಿದ್ದ ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಗಾಯನ ಮಾಡಿದರು. ಹುಮನಾಬಾದ್‍ನ ಮಲ್ಲಿಕಾರ್ಜುನ ರಟಕಲ್ ಅಪ್ಪಣ್ಣನವರ ವಚನ ವಾಚಿಸಿದರು.

ಆರ್. ಕೆ. ಪಾಟೀಲ, ಅಶೋಕ್ ಎಲಿ, ವೈಜಿನಾಥ ಹುಣಸಗೇರಿ, ಪ್ರಕಾಶ್ ಮಠಪತಿ, ನೀಲಮ್ಮ ರೂಗನ್, ಸಂಗೀತಾ ಗಣಾಚಾರಿ, ಜಗದೇವಿ ಚಿಮಕೋಡೆ, ಶಿವಕುಮಾರ ಪಾಖಾಲ್ ಉಪಸ್ಥಿತರಿದ್ದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರೆ ಕದಳಿಶ್ರೀ ಅವಿನಾಶ್ ವಂದಿಸಿದರು.

ಬೀದರ್‌ನ ಶರಣ ಉದ್ಯಾನದಲ್ಲಿ ನೀಲಮ್ಮ ತಾಯಿ ದಾಸೋಹ ಮಂಟಪಕ್ಕೆ ಚಾಲನೆ ನೀಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.