ADVERTISEMENT

ಹಲಸೂರ | ತಂಗುದಾಣ ಶಿಥಿಲ: ಪ್ರಯಾಣಿಕರ ಪರದಾಟ

ಹುಲಸೂರ: ಬಸ್ಸಿಗಾಗಿ ಬಿಸಿಲು–ಮಳೆಯಲ್ಲೇ ಕಾಯಬೇಕು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:21 IST
Last Updated 12 ಆಗಸ್ಟ್ 2025, 6:21 IST
ಹುಲಸೂರ ತಾಲ್ಲೂಕಿನ ಭಾಲ್ಕಿ - ಬಸವಕಲ್ಯಾಣ ಮುಖ್ಯ ರಸ್ತೆಯ ಗಡಿಗೌಡಗಾಂವ ಗ್ರಾಮದ ಬಳಿ ಪಾಳುಬಿದ್ದ ಬಸ್ ತಂಗುದಾಣದ ದುಸ್ಥಿತಿ
ಹುಲಸೂರ ತಾಲ್ಲೂಕಿನ ಭಾಲ್ಕಿ - ಬಸವಕಲ್ಯಾಣ ಮುಖ್ಯ ರಸ್ತೆಯ ಗಡಿಗೌಡಗಾಂವ ಗ್ರಾಮದ ಬಳಿ ಪಾಳುಬಿದ್ದ ಬಸ್ ತಂಗುದಾಣದ ದುಸ್ಥಿತಿ   

ಹಲಸೂರ: ತಾಲ್ಲೂಕಿನಲ್ಲಿ ಹಲವು ಬಸ್ ತಂಗುದಾಣಗಳು ಶಿಥಿಲಗೊಂಡಿದ್ದು, ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು, ಜನರು ಅನಿವಾರ್ಯವಾಗಿ ರಸ್ತೆ ಪಕ್ಕದ ಅಂಗಡಿಗಳ ಮುಂದೆ ಬಿಸಿಲು–ಮಳೆ ಎನ್ನದೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಮಳೆಗಾಲದ ಹಿನ್ನಲೆ ಮೋಡಕವಿದ ವಾತಾವರಣವಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ವಿದ್ಯಾರ್ಥಿಗಳು ಮಳೆಯಲ್ಲೇ ನಿತ್ಯ ಶಾಲೆ ಕಾಲೇಜುಗಳಿಗೆ ತೆರಳಬೇಕಾಗಿದೆ. ಆದರೆ ಸೂಕ್ತವಾದ ತಂಗುದಾಣದ ವ್ಯವಸ್ಥೆ ಇಲ್ಲದ ಕಾರಣ ಮಳೆಯಲ್ಲಿ ನೆನೆದುಕೊಂಡೇ ಬಸ್ಸು ಹತ್ತುವ ತಾಪತ್ರಯವಿದೆ.

ಹಲಸೂರ ತಾಲ್ಲೂಕಿನ ಸುತ್ತಮುತ್ತ ಗ್ರಾಮೀಣ ಭಾಗಗಳಲ್ಲಿ 20 ವರ್ಷಕ್ಕೂ ಹೆಚ್ಚು ಹಳೆಯದಾದ ತಂಗುದಾಣಗಳಿವೆ. ಅವುಗಳ ಚಾವಣಿ ಸಿಮೆಂಟ್ ಪದರು ಕಿತ್ತು ಹೋಗಿವೆ. ಕಬ್ಬಿಣದ ರಾಡ್ ಹೊರ ಬಿದ್ದು ಕುಸಿಯುವ ಹಂತ ತಲುಪಿವೆ. ಉತ್ತಮ ಸ್ಥಿತಿಯಲ್ಲಿರುವ ತಂಗುದಾಣಗಳನ್ನು ಇಲ್ಲಿ ಹುಡುಕಿದರೂ ಸಿಗುವುದಿಲ್ಲ. ನಿರ್ವಹಣೆಯ ಕೊರತೆಯಿಂದಾಗಿ ಬಹುತೇಕ ತಂಗುದಾಣಗಳು ಶಿಥಿಲಾವಸ್ಥೆ ತಲುಪಿವೆಯಾದರೂ ಇತ್ತ ತಿರುಗಿ ನೋಡುವವರೂ ಇಲ್ಲ. ಪ್ರಯಾಣಿಕರ ಗೋಳು ತಪ್ಪುತ್ತಿಲ್ಲ.

ADVERTISEMENT

ಇನ್ನೂ ಕೆಲ ತಂಗುದಾಣಗಳು ಕಸ ಹಾಕುವ ತೊಟ್ಟೆಗಳಾಗಿ ಮಾರ್ಪಟ್ಟಿವೆ, ಕೆಲವು ಕುಡಕರ, ನಿರಾಶ್ರಿತರ ಅಶ್ರಯ ತಾಣಗಳಾಗಿವೆ. ನಿರ್ವಹಣೆ ಇಲ್ಲದ ಕಾರಣ ತಂಗುದಾಣಗಳಲ್ಲಿ ಕಸ, ಪ್ಲಾಸ್ಟಿಕ್, ಮಳೆನೀರು ಸೇರಿ ದುರ್ವಾಸನೆ ಬೀರುತ್ತಿದೆ. ಸುತ್ತಮುತ್ತಲಿನ ಜನರ ಆರೋಗ್ಯಕ್ಕೂ ಇದರಿಂದ ತೊಂದರೆ.

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ತಾಲ್ಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಸಮುದಾಯ ಭವನ, ತಂಗುದಾಣ, ಗ್ರಂಥಾಲಯ ಸೇರಿ ಇತರೆ ಸರ್ಕಾರಿ ಕಟ್ಟಡಗಳನ್ನು 15ನೇ ಹಣ ಕಾಸು ಯೋಜನೆಯಡಿ ನಿರ್ವಹಣೆ ಮಾಡಲು ಅವಕಾಶ ಇದೆ. ಈ ಹಿಂದೆ ಮಿನಿ ತಂಗುದಾಣಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುತ್ತಿತ್ತು. ಆದರೆ ಈಗ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಇದರ ಹೊಣೆ ನೀಡಲಾಗಿದೆ. ಆದರೆ ಪಿಡಿಒಗಳಾಗಲಿ, ತಾ.ಪಂ. ಇಒ ಆಗಲಿ ಇತ್ತ ತಲೆ ಹಾಕದ ಕಾರಣ ತಂಗುದಾಣಗಳು ಪಾಳುಬಿದ್ದಿವೆ ಎನ್ನುವುದು ಪ್ರಯಾಣಿಕರ ಅಸಮಾಧಾನ.

ದುರಸ್ತಿಗೆ ಕಾದ ತಂಗುದಾಣ: ತಾಲ್ಲೂಕಿನ ಗಡಿಗೌಡಗಾಂವ, ಬೇಲೂರ ಗ್ರಾಮದಲ್ಲಿನ ತಂಗುದಾಣ ದುರಸ್ತಿಗೆ ಕಾದಿವೆ. ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಬಸ್ ತಂಗುದಾಣಗಳಿಲ್ಲ. ತೊಗಲುರ, ಗೋರಟಾ, ಮುಚಳoಬ, ಮೀರಖಲ ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವೆಡೆ ಸುಸಜ್ಜಿತ ಬಸ್‌ ತಂಗುದಾಣಗಳಿಗೆ ಬೇಡಿಕೆಯಿದ್ದು, ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.

ರಸ್ತೆಯಲ್ಲಿ ನಿಲ್ಲುವ ಪ್ರಯಾಣಿಕರು: ಗಡಿಗೌಡಗಾಂವ, ಬೇಲೂರ, ದೇವನಾಳ, ಸೋಲದಾಪಕ, ಗೋರಟಾ, ಹನುಮಂತವಾಡಿ, ಕೋಟಮಾಳ, ಅಂಬೇವಾಡಿ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ತಂಗುದಾಣವಿಲ್ಲದೇ, ಅನಿವಾರ್ಯವಾಗಿ ಮಳೆಯಲ್ಲಿ, ರಸ್ತೆಪಕ್ಕದ ಮನೆ ಅಂಗಡಿ ಬಳಿ ನಿಲ್ಲಬೇಕಾಗಿದೆ.

ಶಾಸಕರ ನಿರ್ಲಕ್ಷ್ಯ, ಅಭಿವೃದ್ಧಿ ಕುಂಠಿತ: 'ಹಲವು ವರ್ಷಗಳಿಂದ ತಾಲ್ಲೂಕಿನ ಬಸ್ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಶಿಥಲವಾದ ಸ್ಥಿತಿಯಲ್ಲಿವೆ. ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ಶಾಸಕರಿಗೆ ಈ ತಂಗುದಾಣಗಳ ಸ್ಥಿತಿಗಳು ಕಾಣುವುದಿಲ್ಲವೇ' ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

ಹುಲಸೂರ ತಾಲ್ಲೂಕಿನ ಎಲ್ಲ ಪಿಡಿಒಗಳಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಬಸ್ ತಂಗುದಾಣಗಳನ್ನು ಪರಿಶೀಲಿಸಿ ದುರಸ್ತಿ ಆಗಬೇಕಿದ್ದರೆ ಸರಿಪಡಿಸಲು ಸೂಚಿಸಿ ಕ್ರಮಕೊಳ್ಳಲಾಗುವುದು
ಮಹಾದೇವ ಜಮ್ಮು ಹುಲಸೂರ ತಾ.ಪಂ ಇಒ
ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಮಿನಿ ಬಸ್ ತಂಗುದಾಣ ಇಲ್ಲದೇ ಜನರು ಮಳೆ ಬಿಸಿಲಿನ ಸಂಕಷ್ಟ ಎದುರಿಸುವಂತಾಗಿದೆ. ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಬೇಕು
ಎಂ.ಜಿ.ರಾಜೊಳೆ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕರು
ಗಡಿಗೌಡಗಾಂವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬಳಿಯ ಬಸ್ ತಂಗುದಾಣ ದುರಸ್ತಿಗೆ ಕಾದು ಹಲವು ವರ್ಷಗಳು ಕಳೆದಿವೆ. ಇದರ ನಿರ್ವಹಣೆಗೆ ಯಾರೂ ಸ್ಪಂದಿಸಿಲ್ಲ. ನಿತ್ಯ ರಸ್ತೆಯಲ್ಲಿ ನಿಂತು ಬಸ್ ಏರುವ ಸ್ಥಿತಿಯಿದೆ
ಸತೀಶ ಹಿರೇಮಠ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.