ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಹನುಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಹನುಮಾನ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ತಳಿರು ತೋರಣಗಳನ್ನು ಕಟ್ಟಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ನಗರದ ಹೈದರಾಬಾದ್ ರಸ್ತೆ, ಜನವಾಡ ರಸ್ತೆ, ಮೈಲೂರಿನ ಸಿಎಂಸಿ ಕಾಲೊನಿ, ಚಿದ್ರಿ ಹನುಮಾನ ದೇವಸ್ಥಾನ ಸೇರಿದಂತೆ ಎಲ್ಲೆಡೆ ಬೆಳಿಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಡೆಗಳಿಂದ ಭಕ್ತರು ದೇಗುಲಕ್ಕೆ ತೆರಳಿ ದರ್ಶನ ಪಡೆದರು. ವಿಶ್ವ ಹಿಂದೂ ಪರಿಷತ್ತಿನಿಂದ ನಗರದಲ್ಲಿ ಸಂಜೆ ಶೋಭಾಯಾತ್ರೆ ನಡೆಸಲಾಯಿತು. ಗದೆ ಹಿಡಿದ ಹನುಮಂತನ ಪ್ರತಿಕೃತಿಯ ಭವ್ಯ ಮೆರವಣಿಗೆ ಮಾಡಿದರು. ನಗರದ ಶಹಾಗಂಜ್‌ನಿಂದ ಆರಂಭಗೊಂಡ ಮೆರವಣಿಗೆಯು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾದು ಪುನಃ ಮೂಲ ಜಾಗ ತಲುಪಿತು.
ಬಸವೇಶ್ವರ ವೃತ್ತದಲ್ಲಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ ಮಾತನಾಡಿ, ‘ರಜಾಕಾರರ ಹಾವಳಿಗೆ ಮುಕ್ತಿ ಹಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ನಾಡು ಬೀದರ್. ಇಂದು ಭಕ್ತಿ ಭಾವದಿಂದ ಎಲ್ಲರೂ ಹನುಮ ಜಯಂತಿಯಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ. ಇದರ ಮೂಲಕ ಹಿಂದೂ ಸಮಾಜ ಜಾಗೃತರಾಗಬೇಕು. ರಾಮ ಮತ್ತು ರಾಷ್ಟ್ರಭಕ್ತಿ ಬೇರೆಯಿಲ್ಲ. ಎರಡೂ ಬೇರೆ ಮಾಡಲು ಸಾಧ್ಯವಿಲ್ಲ’ ಎಂದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮುಖಂಡರಾದ ಭಗವಂತ ಖೂಬಾ, ಈಶ್ವರ ಸಿಂಗ್ ಠಾಕೂರ್, ಬಾಬುವಾಲಿ, ಶಶಿಧರ ಹೊಸಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ತಾಲ್ಲೂಕಿನ ಜನವಾಡ, ಮರಕಲ್, ಚಿಕ್ಕಪೇಟೆ, ಚಿಟ್ಟಾವಾಡಿ, ಯಾಕತಪೂರ, ಚಟ್ನಳ್ಳಿ ಸೇರಿದಂತೆ ಹಲವೆಡೆ ಹನುಮ ಜಯಂತಿ ಆಚರಿಸಲಾಯಿತು.
ಮೈಲೂರ ಸಿಎಂಸಿ ಕಾಲೊನಿ: ಇಲ್ಲಿನ ವೀರ ಹನುಮಾನ ಹಾಗೂ ವಿಠ್ಠಲ-ರುಕ್ಮಿಣಿ ಮಂದಿರದ ಕಳಸಾರೋಹಣ ಭಕ್ತಿ, ಶ್ರದ್ಧೆಯಿಂದ ನೆರವೇರಿತು.
ಸಂಸದ ಸಾಗರ್ ಖಂಡ್ರೆ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಹಲಬರ್ಗಾದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ‍್ಯ ಮತ್ತಿತರರು ಪಾಲ್ಗೊಂಡಿದ್ದರು.
ಚಿದ್ರಿ: ಇಲ್ಲಿನ ಹನುಮಾನ ದೇವಸ್ಥಾನದ ನೂತನ ಗೋಪುರದ ಕಲಶಾರೋಹಣ ಸಮಾರಂಭ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಿತು. ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.