
ಭಾಲ್ಕಿ: ತಾಲ್ಲೂಕಿನ ಚಾಳಕಾಪೂರ ಗ್ರಾಮದಲ್ಲಿ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಅದ್ದೂರಿಯಾಗಿ ನಡೆದ ಹನುಮಾನ ದೇವರ ಅಂಬಾರಿ ಉತ್ಸವ, ಪಲ್ಲಕ್ಕಿ ಮೆರವಣಿಗೆಯ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಕತಾರ್ಥರಾದರು.
ಮಂಗಳವಾರ ತಡರಾತ್ರಿ ಆರಂಭವಾದ ಆನೆ ಮೇಲಿನ ಹನುಮಾನ ದೇವರ ಅಂಬಾರಿ ಉತ್ಸವ ಬೆಳಗಿನ ಜಾವದವರೆಗೆ ಜರುಗಿತು. ಈ ಅಂಬಾರಿ ಉತ್ಸವದಲ್ಲಿ ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರೆಡೆಯ ಭಕ್ತರು ಸಂಭ್ರಮದಿಂದ ಪಾಲ್ಗೊಂಡು ಹನುಮಾನ ದೇವರ ಕೃಪೆಗೆ ಪಾತ್ರರಾದರು.
ಈ ಅಂಬಾರಿ ಉತ್ಸವದಲ್ಲಿ ವಿವಿಧೆಡೆಯಿಂದ ಆಗಮಿಸಿದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿ ಸಭಿಕರಿಂದ ಸೈ ಎನಿಸಿಕೊಂಡವು. ಬುಧವಾರ ಸಂಜೆ ಅನೇಕ ಭಕ್ತರ ಸಮ್ಮುಖದಲ್ಲಿ ಹನುಮಾನ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿತು. ನಂತರ ಗ್ರಾಮದ ಹನುಮಾನ ದೇವಸ್ಥಾನದಿಂದ ಸಂಜೀವಿನಿ ಪರ್ವತದವರೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದ ಮಧ್ಯೆ ಜರುಗಿತು. ಗುರುವಾರ ರಾಜ್ಯದ ವಿವಿಧ ಜಿಲ್ಲೆಗಳು ಒಳಗೊಂಡಂತೆ ರಾಜ್ಯಗಳಿಂದಲೂ ಆಗಮಿಸಿದ ಕುಸ್ತಿಪಟುಗಳು ತಮ್ಮ ಜಂಗಿ ಕುಸ್ತಿಯ ಕಲೆಯನ್ನು ಪ್ರದರ್ಶಿಸಿ ಸಭಿಕರ ಮನರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.