ADVERTISEMENT

ಯೋಗಿ ಮಾದರಿ ಆಡಳಿತದಿಂದ ರಾಜ್ಯಕ್ಕೆ ಬೆಂಕಿ: ಎಚ್‌.ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 13:16 IST
Last Updated 29 ಜುಲೈ 2022, 13:16 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೀದರ್‌: ‘ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬಂದರೆ ಬೆಂಕಿ ಹಚ್ಚಿಕೊಳ್ಳುವ ಕೆಲಸ ಶುರುವಾಗಲಿದೆ. ಇದರೊಂದಿಗೆ ಬಿಜೆಪಿ ಅವನತಿಯೂ ಆರಂಭವಾಗಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

‘ಉತ್ತರಪ್ರದೇಶವೇ ಬೇರೆ, ಕರ್ನಾಟಕವೇ ಬೇರೆ. ಉತ್ತರಪ್ರದೇಶದಲ್ಲಿ ಏನಾಗಿದೆ ಎನ್ನುವ ಕುರಿತು ಇಲ್ಲಿ ಚರ್ಚೆ ಮಾಡುವುದಿಲ್ಲ. ಕಾರ್ಯಕರ್ತರೇ ಬಿಜೆಪಿಗೆ ರಾಜೀನಾಮೆ ಕೊಡುತ್ತಿರುವುದು ಬಿಜೆಪಿ ಪತನದ ಹಾದಿ ಹಿಡಿದಿರುವುದರ ಮುನ್ಸೂಚನೆಯಾಗಿದೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮಂಗಳೂರಿನಲ್ಲೇ ಇದ್ದ ಮುಖ್ಯಮಂತ್ರಿ ಒಂದು ಕಡೆ ₹ 50 ಲಕ್ಷ ಕೊಟ್ಟರು. ಇನ್ನೊಂದು ಕಡೆ ಕೊಲೆ ನಡೆದರೂ ಅಲ್ಲಿಗೆ ಭೇಟಿ ಕೊಡಲಿಲ್ಲ. ಸರ್ಕಾರದಿಂದ ಆ ಸಮುದಾಯದಲ್ಲಿ ವಿಶ್ವಾಸ ಮೂಡಿಸುವ ಕನಿಷ್ಠ ಸೌಜನ್ಯದ ಮಾತೂ ಆಡಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಠ ತಿಳಿವಳಿಕೆ ಇದ್ದರೆ ಎರಡೂ ಸಮುದಾಯಗಳಿಗೆ ಶಾಂತಿಯಿಂದ ಇರುವ ಸಂದೇಶ ನೀಡಬಹುದಿತ್ತು. ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಯಾರೂಬ್ಬರೂ ಮನವಿ ಮಾಡುತ್ತಿಲ್ಲ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ರಕ್ತದ ಓಕುಳಿ ನಿಲ್ಲಿಸಲು ಎರಡೂ ಸಮುದಾಯದವರಿಗೆ ನಾನು ಮನವಿ ಮಾಡುತ್ತೇನೆ. ಅಮಾಯಕ ಮಕ್ಕಳನ್ನು ಬಲಿಕೊಡದಂತೆ ಕೇಳಿಕೊಳ್ಳುತ್ತೇನೆ’ ಎಂದರು.

‘ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದ ಸಮಸ್ಯೆ ಸೃಷ್ಟಿಸಿದವರೇ ಕಾಂಗ್ರೆಸ್ ಹಾಗೂ ಬಿಜೆಪಿಯವರು. 1994ರಲ್ಲಿ ಜನತಾ ದಳ ಸರ್ಕಾರ ಅಧಿಕಾರಕ್ಕೆ ಬಂದು ಸಮಸ್ಯೆ ಬಗೆ ಹರಿಸಿತು. ಬೆಂಗಳೂರಿನಲ್ಲಿ ರೌಡಿಗಳನ್ನೂ ನಿಯಂತ್ರಿಸಿತು. ಈಗ ಮತ್ತೆ ಪುಡಿ ರೌಡಿಗಳು ಹುಟ್ಟಿಕೊಂಡಿದ್ದಾರೆ’ ಎಂದು ಹೇಳಿದರು.

‘ಗೃಹ ಸಚಿವರೇ ಪೊಲೀಸ್‌ ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ನಾಯಿಗಳು ಇದ್ದ ಹಾಗೆ ಎಂದು ಹೇಳಿಕೊಟ್ಟರು. ಸಚಿವರೇ ಈ ರೀತಿಯ ಹೇಳಿಕೆ ಕೊಟ್ಟ ಮೇಲೆ ಪೊಲೀಸ್‌ ಅಧಿಕಾರಿಗಳು ಯಾವ ಮನೋಸ್ಥೈರ್ಯದ ಮೇಲೆ ಕೆಲಸ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

‘ಸರ್ಕಾರ ಆರಂಭಿಕ ಹಂತದಲ್ಲೇ ಬಿಗಿ ಕ್ರಮ ಕೈಗೊಳ್ಳಬೇಕಿತ್ತು. ಪೊಲೀಸರಿಗೆ ಮುಕ್ತ ಅವಕಾಶ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ, ಪೊಲೀಸ್‌ ಇಲಾಖೆ ಮಧ್ಯೆ ವಿಶ್ವಾಸ ಕೊರತೆ ಇದೆ. ಪೊಲೀಸರ ವರ್ಗಾವಣೆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ನಡೆದಾಗಲೇ ಸರ್ಕಾರ ಸತ್ತು ಹೋಗಿದೆ. ಕರಾವಳಿಯ ಸಮಸ್ಯೆ ಇಂದು, ನಿನ್ನೆ, ಮೊನ್ನೆಯದಲ್ಲ. ಹದಿನೈದು ವರ್ಷಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ’ ಎಂದು ಗಂಭೀರ ಆರೋಪ ಮಾಡಿದರು.

‘ಒಂದು ಪಕ್ಷ ಹಿಂದೂಗಳು, ಇನ್ನೊಂದು ಪಕ್ಷ ಮುಸ್ಲಿಮರನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌, ಬಿಜೆಪಿ ಮತಕ್ಕಾಗಿ ರಾಜಕೀಯ ಮಾಡುತ್ತಿವೆ. ಮಕ್ಕಳಲ್ಲಿ ಧಾರ್ಮಿಕ ವಿಷ ಬಿತ್ತುತ್ತಿವೆ. ಶವದ ಮೇಲೆ ರಾಜಕೀಯ ಮಾಡುತ್ತಿವೆ’ ಎಂದು ಟೀಕಿಸಿದರು.

‘ಸುಸಜ್ಜಿತ ಆರೋಗ್ಯ ಕೇಂದ್ರ ಇದ್ದಿದ್ದರೆ ಪ್ರವೀಣ ಉಳಿಯುತ್ತಿದ್ದರು ಎಂದು ಪ್ರವೀಣ ಪತ್ನಿ ಹೇಳಿದ್ದಾರೆ. ಇದು ಆರೋಗ್ಯ ಇಲಾಖೆಯ ವ್ಯವಸ್ಥೆಯನ್ನು ಬಿಂಬಿಸಿದೆ’ ಎಂದು ಟೀಕಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಒಂದೂ ಹತ್ಯೆ ನಡೆದಿಲ್ಲ. ಆಗ ಮಂಗಳೂರಿನಲ್ಲಿ ಒಂದು ಗಲಭೆ ಸೃಷ್ಟಿಸಲು ಪ್ರಯತ್ನಿಸಲಾಯಿತು. ನಾನು ಅಲ್ಲಿಗೆ ಹೋಗಿ 48 ಗಂಟೆಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಸೌಹಾರ್ದಯುತ ಸಂಬಂಧ ಹಾಳಾಗಿದೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಲು ನಾಡಿನ ಜನತೆ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ಬೇರು ಸಮೇತ ಕಿತ್ತು ಹಾಕಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.