ಬೀದರ್: ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಮಳೆ ಸುರಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತು.
ಗುರುವಾರ ಬೆಳಿಗ್ಗೆ ಆರಂಭಗೊಂಡ ಜಿಟಿಜಿಟಿ ಮಳೆ ದಿನವಿಡೀ ಸುರಿಯಿತು. ನಡು ನಡುವೆ ಧಾರಾಕಾರ ಮಳೆ ಆಯಿತು. ನಿರಂತರ ಮಳೆಯಿಂದ ದೈನಂದಿನ ಕೆಲಸಗಳಿಗೆ ಹೋಗುವವರು, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಪರದಾಟ ನಡೆಸಿದರು. ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಿತು.
ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದ್ದರಿಂದ ಗುರುವಾರ ಸಂಜೆ ನಂತರ ಹೆಚ್ಚಿನವರು ಹೊರಗೆ ಬರಲಿಲ್ಲ. ಅಲ್ಲಲ್ಲಿ ಕೆಲವರು ಕೊಡೆ ಹಿಡಿದುಕೊಂಡು ನಡೆದಾಡುತ್ತಿರುವುದು ಕಂಡು ಬಂತು. ಸತತ ಮಳೆಗೆ ಬೀದರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಗ್ಗು ಪ್ರದೇಶಗಳ ಜಮೀನುಗಳಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡಿದ್ದು, ಕೆರೆಯಂತೆ ಭಾಸವಾಗುತ್ತಿದೆ. ಸಿಡಿಲಿಗೆ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಆಕಳು ಮೃತಪಟ್ಟಿದೆ.
ಬುಧವಾರ ಸಂಜೆ ಆರಂಭಗೊಂಡ ಧಾರಾಕಾರ ಮಳೆ ತಡರಾತ್ರಿ ವರೆಗೆ ಸುರಿಯಿತು. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಳೆಯಿಲ್ಲದೆ ಆತಂಕಗೊಂಡಿದ್ದ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬೀದರ್ ತಾಲ್ಲೂಕಿನ ಮರಕಲ್ ಸಮೀಪದ ಹೊಲ ಕೆರೆಯಂತಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.