ADVERTISEMENT

ಬೀದರ್: ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಹಸ್ತ ಕಾರ್ಯ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 31 ಮೇ 2025, 15:36 IST
Last Updated 31 ಮೇ 2025, 15:36 IST
ಬೀದರ್ ನಗರದ ಪತ್ರಿಕಾ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು
ಬೀದರ್ ನಗರದ ಪತ್ರಿಕಾ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು   

ಬೀದರ್: ‘ಸಂಕಷ್ಟದಲ್ಲಿರುವ ಪತ್ರಕರ್ತರಿಗಾಗಿ ಆಪತ್ ರಕ್ಷಕ ನಿಧಿಯಿಂದ ಸಹಾಯಧನ ನೀಡುತ್ತಿರುವುದು ಶ್ಲಾಘನೀಯ’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 70ಕ್ಕೂ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೇರಳ ಕಾಸರಗೋಡಿನಲ್ಲಿ ಇತ್ತಿಚೀಗೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಮೌಲಾನಾಸಾಬ್(ಹಾಜಿಪಾಶಾ) ಅವರಿಗೆ ಸನ್ಮಾನ ಹಾಗೂ ಸಂಕಷ್ಟಕ್ಕೆ ಒಳಗಾದ ಪತ್ರಕರ್ತೆ ಕೀರ್ತಿ ಸೇನಾ ಅವರಿಗೆ ಆಪತ್‌ರಕ್ಷಕ ನಿಧಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಭಾ ಪುರಸ್ಕಾರಗಳು ಮತ್ತು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಹಸ್ತ ಚಾಚುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಬೀದರ್ ಪತ್ರಕರ್ತರ ಸಂಘ ಉತ್ತಮವಾಗಿ ಕಾರ್ಯ ಮಾಡುತ್ತಿದೆ ಎಂಬ ಸಂತಸದ ಭಾವ ಮೂಡುತ್ತಿದೆ ಎಂದು ತಿಳಿಸಿದರು.‌

ADVERTISEMENT

ಹಿರಿಯ ಪತ್ರಕರ್ತ ಬಾಬು ವಾಲಿ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕಾಮಶೆಟ್ಟಿ ಮಾತನಾಡಿದರು. ಪತ್ರಕರ್ತರಾದ ಗಂಧರ್ವ ಸೇನಾ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಅಪ್ಪಾರಾವ ಸೌದಿ, ಅಶೋಕ್ ಕುಮಾರ್ ಕರಂಜಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಚೌಧರಿ, ಮಾಳಪ್ಪ ಅಡಸಾರೆ, ನಾಗಶೆಟ್ಟಿ ಧರಂಪೂರ, ಪ್ರದಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪೃಥ್ವಿರಾಜ್ ಎಸ್. ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸಂಕಷ್ಟಕ್ಕೆ ಒಳಗಾದ ಕೀರ್ತಿ ಸೇನಾ ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಮೌಲಾನಾ ಸಾಬ್ (ಹಾಜಿ ಪಾಶಾ) ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಸಾಧಕ ವಿದ್ಯಾರ್ಥಿಗಳಾದ ತನೀಶ್ ಓಂಕಾರ ಮಠಪತಿ, ದಿವ್ಯಮಣಿ ಗೋಪಿಚೆಂದ ತಾಂದಳೆ, ವಿನಯ್ ಸಂಜಯ ದಂತಕಾಳೆ, ಜಗದೇಶ್ವರಿ ನಾಗಶೆಟ್ಟಿ ದರಂಪುರ, ಆದಿತ್ಯ ನಾಗೇಶ ಪ್ರಭಾ, ಶರಣಬಸವ ತಂದೆ ಮಲ್ಲಿಕಾರ್ಜುನ ಮರಕಲೆ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.