ADVERTISEMENT

‘ಹೈಕೋರ್ಟ್‌ ಸಿ.ಜೆ ಸ್ಥಾನಕ್ಕೇರಲಿ’

ರವಿ ಮಳಿಮಠ ಅವರ ಬೀಳ್ಕೊಡುಗೆಯಲ್ಲಿ ಹೆಚ್ಚುವರಿ ಸಾಲಿಸಿಟರ್‌ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:25 IST
Last Updated 2 ಮಾರ್ಚ್ 2020, 19:25 IST
ನ್ಯಾಯಮೂರ್ತಿ ರವಿ ಮಳಿಮಠ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ (ಎಡದಿಂದ ನಾಲ್ಕನೆಯವರು) ಸನ್ಮಾನಿಸಿದರು. ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಎ.ಎಸ್‌. ಹರೀಶ್‌, ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ ಹಾಗೂ ಖಜಾಂಚಿ ಶಿವಮೂರ್ತಿ ಇದ್ದರು.
ನ್ಯಾಯಮೂರ್ತಿ ರವಿ ಮಳಿಮಠ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ (ಎಡದಿಂದ ನಾಲ್ಕನೆಯವರು) ಸನ್ಮಾನಿಸಿದರು. ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಎ.ಎಸ್‌. ಹರೀಶ್‌, ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ ಹಾಗೂ ಖಜಾಂಚಿ ಶಿವಮೂರ್ತಿ ಇದ್ದರು.   

ಬೆಂಗಳೂರು: ‘ರಾಜ್ಯದಿಂದ ಉತ್ತರಾಖಂಡ ಹೈಕೋರ್ಟ್‌ಗೆ ವರ್ಗಾವಣೆಯಾಗಿರುವ ನ್ಯಾಯಮೂರ್ತಿ ರವಿ ಮಳಿಮಠ ಅವರು ಶೀಘ್ರದಲ್ಲೇ ಅಲ್ಲಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗುವ (ಸಿ.ಜೆ) ಎಲ್ಲ ಸದವಕಾಶ ಹೊಂದಿದ್ದಾರೆ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ ಹೇಳಿದರು.‌

ನ್ಯಾಯಮೂರ್ತಿ ರವಿ ಮಳಿಮಠ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳ ಕುಟುಂಬದ ಮೂರನೇ ತಲೆಮಾರಿನವರಾದ ರವಿ ವಿ. ಮಳಿಮಠ ಅವರು, ಅತ್ಯಂತ ಕರಾರುವಾಕ್ಕು ಹಾಗೂ ಖಚಿತವಾದ ನ್ಯಾಯೋಚಿತ ನಿರ್ಣಯ ಕೈಗೊಳ್ಳುವ ಮನಃಸ್ಥಿತಿ ಉಳ್ಳವರು. ಕ್ರಿಮಿನಲ್‌ ಪ್ರಕರಣಗಳ ವಿಲೇವಾರಿಗೆ ಹೆಸರುವಾಸಿ. ಇವರ ವರ್ಗಾವಣೆಯಿಂದ ಎಲ್ಲೊ ಒಂದು ಕಡೆ ರಾಜ್ಯಕ್ಕೆ ನಷ್ಟವಾಗಲಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮಾತನಾಡಿ, ‘ಆಡಳಿತಾತ್ಮಕ ವಿಷಯಗಳಲ್ಲಿ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲು ರವಿ ಮಳಿಮಠ ಅವರು ನನಗೆ ಉತ್ತಮ ಬೆಂಬಲವಾಗಿದ್ದರು’ ಎಂದು ನೆನಪಿನ ಸುರುಳಿ ಬಿಚ್ಚಿಟ್ಟರು.

ADVERTISEMENT

ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಮಾತನಾಡಿ, ‘ಚಿಕ್ಕ ವ್ಯಾಪ್ತಿಯ ಹೈಕೋರ್ಟ್‌ಗೆ ವರ್ಗವಾಗಿರುವ ಮಳಿಮಠ ಅವರು ಪ್ರಕರಣಗಳ ಶೀಘ್ರ ವಿಲೇವಾರಿಗೆ ಎತ್ತಿದ ಕೈ. ಇಂತಹವರು ಅಲ್ಲಿ ತಮ್ಮ ವಿರಾಮದ ಸಮಯವನ್ನು ಸಾಹಿತ್ಯಕ್ಕೆ ಮೀಸಲಿಡಲು ಪ್ರಯತ್ನಿಸ
ಬೇಕು’ ಎಂದು ಆಶಿಸಿದರು.

ರವಿ ಮಳಿಮಠ ಮಾತನಾಡಿ, ‘ಬೆಂಗಳೂರು ವಕೀಲರ ಸಂಘದಲ್ಲಿ ಹಲವು ಮೇಧಾವಿ ವಕೀಲರಿದ್ದಾರೆ. ಇವರಿಗೆ ಹಿರಿಯರು ಸುಸಂಸ್ಕೃತ ರೀತಿಯಲ್ಲಿ ಮಾರ್ಗದರ್ಶನ ಮಾಡುವ ಅಗತ್ಯವಿದೆ’ ಎಂದರು.

ಅಧ್ಯಕ್ಷ ಎ.ಪಿ.ರಂಗನಾಥ್‌, ‘ರವಿ ಮಳಿಮಠ ಒಬ್ಬ ನೇರ, ನಿಷ್ಠುರಿ’ ಎಂದು ಬಣ್ಣಿಸಿದರು. ಇದೇ ವೇಳೆ, ‘ರವಿ ಮಳಿಮಠ ಅವರು ಸಂಘದ ಕಲ್ಯಾಣ ನಿಧಿಗೆ ಒಂದು ಲಕ್ಷ ಮೊತ್ತದ ಚೆಕ್ ನೀಡಿದ್ದಾರೆ’ ಎಂದು ತಿಳಿಸಿದರು.

‘ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕದ ಶಿಫಾರಸು ಪಟ್ಟಿಯಲ್ಲಿರುವ ಮೂವರು ವಕೀಲರ ಹೆಸರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆದಷ್ಟು ಶೀಘ್ರವೇ ಅಂತಿಮಗೊಳಿಸಬೇಕು’ ಎಂದೂ ರಂಗನಾಥ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.