ADVERTISEMENT

ದೈಹಿಕ, ಮಾನಸಿಕ ಸ್ಥೈರ್ಯ ವೃದ್ಧಿಗೆ ಕ್ರೀಡೆ; ರಮೇಶ ಪೆದ್ದೇ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:54 IST
Last Updated 5 ಆಗಸ್ಟ್ 2022, 2:54 IST
ಕಮಲನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆ ವತಿಯಿಂದ ಗುರುವಾರ ನಡೆದ ಹೊಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವಾಗತಿಸಲಾಯಿತು
ಕಮಲನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆ ವತಿಯಿಂದ ಗುರುವಾರ ನಡೆದ ಹೊಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವಾಗತಿಸಲಾಯಿತು   

ಕಮಲನಗರ: ‘ಕ್ರೀಡೆಗಳು ಮಾನಸಿಕ ಸ್ಥೈರ್ಯ ಹೆಚ್ಚಿಸುವುದರ ಜತೆಗೆ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತವೆ’ ಎಂದು ತಹಸೀಲ್ದಾರ್ ರಮೇಶ ಪೆದ್ದೇ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಶಾಲೆ ಮತ್ತು ಉರ್ದು ಶಾಲೆಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಹೊಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು.

‘ಮಕ್ಕಳನ್ನು ಪಠ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲು ಶಿಕ್ಷಕರು ಮುಂದಾಗಬೇಕು‘ ಎಂದು ಅವರು ಹೇಳಿದರು.

ADVERTISEMENT

ಕ್ರೀಡಾ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಟೊಣ್ಣೆ, ‘ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳು ರಾಷ್ಟ್ರಾಭಿಮಾನದ ಪ್ರತೀಕವಾಗಿವೆ‘ ಎಂದರು.

‘ಸರ್ಕಾರ ಕಬ್ಬಡಿ, ಖೋಖೋ, ಕುಸ್ತಿಯಂತಹ ಕ್ರೀಡೆಗಳಿಗೆ ಪ್ರೋತ್ಸಾಹಿಸಿ, ಪ್ರತ್ಯೇಕ ಯೋಜನೆ ರೂಪಿಸಬೇಕು. ಮೂಲಸೌಕರ್ಯ ಕಲ್ಪಿಸಲು ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ, ವಿವಿಧ ಕ್ರೀಡೆಗಳ ಅಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸಬೇಕು’ ಎಂದು ಕೋರಿದರು.

ಗ್ರಾ.ಪಂ ಅಧ್ಯಕ್ಷ ಶಿವರಾಜ ಜುಲ್ಫೆ ಅಧ್ಯಕ್ಷತೆ ವಹಿಸಿದರು. ತಾ.ಪಂ ಕಾರ್ಯನಿರ್ವಾಹ ಅಧಿಕಾರಿ ಸೈಯದ್ ಫಜಲ್, ದೈಹಿಕ ಶಿಕ್ಷಣಾಧಿಕಾರಿ ಶಿವಾಜಿ ಬೆಂಜಲವಾಡ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ಬಿರಾದಾರ, ಪಿಡಿಒ ರಾಜಕುಮಾರ ತಂಬಾಕೆ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ತೋರಣೇಕರ್, ಸಲ್ಲಾವೊದ್ದೀನ್ ದಾವುದ್‍ಸಾಬ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಂಡರಿ ಆಡೆ, ಅಧ್ಯಕ್ಷ ಬಸವರಾಜ ಪಾಟೀಲ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ
ಶಶೀಕುಮಾರ ಬಿಡವೆ, ಡೋಣಗಾಂವ ಸಿ ಆರ್‌ಸಿ ರಮಾಕಾಂತ ಕಾಳೆ, ಮುಖ್ಯಶಿಕ್ಷಕ ವೀರಭದ್ರಪ್ಪ ಸಜ್ಜನಶೆಟ್ಟಿ ಇತರರು ಇದ್ದರು.

ಓದಿನೊಂದಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ’

ಖಟಕಚಿಂಚೋಳಿ: ಇಲ್ಲಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಡ್ಡೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರಬಹುದು' ಎಂದು ತಿಳಿಸಿದರು.

‘ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಗೆದ್ದರೆ ಹಿಗ್ಗದೇ ಸೋತರೆ ಕುಗ್ಗಬಾರದು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು’ ಎಂದು ಸಲಹೆ ನೀಡಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ಧ ಜಾಡರ್ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆ ಇಲ್ಲ. ಬದಲಾಗಿ ಪ್ರೋತ್ಸಾಹದ ಕೊರತೆ ಇದೆ. ಹೀಗಾಗಿ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು’ ಎಂದರು.

ಮುಖ್ಯ ಶಿಕ್ಷಕ ರಾಜಕುಮಾರ ಜೋಳದಾಪಕೆ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷೆ ತಮೀಜಾ ಬೇಗಂ, ಎಸ್ ಡಿಎಂಸಿ ಅಧ್ಯಕ್ಷ ಉದಯಕುಮಾರ ಶೀಲವಂತ, ರೋಹಿದಾಸ ರಾಠೋಡ, ಮನೋಹರ ಹೋಳ್ಕರ್, ಮಲ್ಲಿನಾಥ ಸಜ್ಜನ್, ರಾಜಪ್ಪ ಪಾಟೀಲ, ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಶೇಕ್ ಷಾ ಪಟೇಲ್, ನಾಗನಾಥ ದುಬಲಗುಂಡೆ , ಹಣಮಂತರಾವ್ ಕಾರಾಮುಂಗೆ, ವಿಜಯಕುಮಾರ ಚವ್ಹಾಣ್, ದತ್ತು ಕಾಟ್ಕರ್, ಪಂಚಾಯಿತಿ ಸದಸ್ಯರಾದ ಸಂಜುಕುಮಾರ‌ ಜವಾದೆ, ಪವನ‌ ಉದ್ದಿನ, ಜೈರಾಜ ದಾಬಶೆಟ್ಟೆ , ಅನಿಲ ಚಿಲಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.