ಬೀದರ್: ‘ಅಲ್ಪಾವಧಿ ಬೆಳೆಗಳನ್ನು ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗಲು ಮುಂದಾಗಬೇಕು’ ಎಂದು ತೋಟಗಾರಿಕೆ ಕಾಲೇಜಿನ ಡೀನ್ ಪ್ರೊ.ಎಸ್.ವಿ. ಪಾಟೀಲ್ ತಿಳಿಸಿದರು.
ನಗರದ ತೋಟಗಾರಿಕೆ ಕಾಲೇಜಿನಲ್ಲಿ ಏರ್ಪಡಿಸಿದ್ದ ತೋಟಗಾರಿಕೆ ಬೆಳೆಗಳ ಸಮಗ್ರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವುದರಿಂದ ರೈತರು ತೋಟಗಾರಿಕೆ ಬೆಳೆಗಳಲ್ಲಿ ಹನಿ ಹಾಗೂ ತುಂತುರು ನೀರಾವರಿ ಘಟಕಗಳನ್ನು ಅಳವಡಿಸಿಕೊಂಡು ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು. ರೈತರು ತಮ್ಮ ತಾಕಿನ ಮಣ್ಣು ಹಾಗೂ ನೀರಿನ ಮಾದರಿ ಪರೀಕ್ಷೆಯನ್ನು ಮಾಡಿಸಿ ಬೆಳೆಗಳನ್ನು ಪೂರ್ವ ನಿರ್ಧರಿಸಿ ಬಿತ್ತನೆ ಮಾಡಬಹುದು. ಕಾಲೇಜಿನ ಸುಜಲಾ ಜಲಾನಯನ ಘಟದ ಸದುಪಯೋಗ ಪಡೆಯಬಹುದು ಎಂದು ಹೇಳಿದರು.
ತೋಟಗಾರಿಕೆಯಲ್ಲಿ ಬಹು ವಾರ್ಷಿಕ ಬೆಳೆಗಳಿಂದ ರೈತರು ಮೊದಲಿನ ಒಂದೆರಡು ವರ್ಷಗಳ ಆದಾಯದಿಂದ ಕೃಷಿಗೆ ಹೂಡಿದ ಬಂಡವಾಳವನ್ನು ಮರಳಿ ಪಡೆದು ಕ್ರಮೇಣ ನಾಲ್ಕೈದು ವರ್ಷಗಳ ನಂತರ ಹೆಚ್ಚಿನ ಲಾಭವನ್ನು ಅತಿ ಕಡಿಮೆ ಖರ್ಚಿನಲ್ಲಿ ಪಡೆದುಕೊಳ್ಳಬಹುದು. ಬಹುವಾರ್ಷಿಕ ಬೆಳೆಗಳ ಜೊತೆಗೆ ತರಕಾರಿಯನ್ನು ಅಂತರ ಬೆಳೆಯಾಗಿ ಬೆಳೆಸಿ ವರ್ಷವಿಡಿ ಆದಾಯದ ಜೊತೆಗೆ ಕುಟುಂಬಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು.
ಕಲಬುರಗಿ ಕೃಷಿ ಕಾಲೇಜಿನ ನಿವೃತ್ತ ಡೀನ್ ಸುರೇಶ್ ಪಾಟೀಲ ಮಾತನಾಡಿ, ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ಕ್ರಮದಿಂದ ರೈತರ ಆರ್ಥಿಕ ಮಟ್ಟ ಹೆಚ್ಚಾಗುತ್ತದೆ ಎಂದರು.
ಪ್ರಾಧ್ಯಾಪಕ ಮುಹಮ್ಮದ್ ಫಾರೂಕ್, ಸಹಾಯಕ ಪ್ರಾಧ್ಯಾಪಕ ವಿ.ಪಿ. ಸಿಂಗ್, ಕ್ಷೇತ್ರ ಅಧಿಕಾರಿ ಅಮರನಾಥ ಬಿರಾದಾರ, ಔರಾದ್ ಜೀವನಧಾರ ಯೋಜನೆಯ ಸಂಪನ್ಮೂಲ ವ್ಯಕ್ತಿ ಅರವಿಂದಕುಮಾರ ರಾಠೋಡ್, ಜಾಹ್ನವಿ, ರಾಜಕುಮಾರ ಎಂ., ಅಬ್ದುಲ್ ಕರೀಮ್ ಅವರು ತೋಟಗಾರಿಕೆ ಬೆಳೆಗಳ ಆಧುನಿಕ ಬೇಸಾಯ ಪದ್ಧತಿ ಕುರಿತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಿದರು. ಔರಾದ್ ತಾಲ್ಲೂಕಿನ 80 ರೈತರು ಪಾಲ್ಗೊಂಡಿದ್ದರು.
80 ರೈತರಿಗೆ ತೋಟಗಾರಿಕೆ ತರಬೇತಿ ಮಣ್ಣು, ನೀರಿನ ಪರೀಕ್ಷೆಗೆ ಸಲಹೆ ಸುಜಲಾ ಸದುಪಯೋಗಕ್ಕೆ ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.