ADVERTISEMENT

ವೀರಶೈವ ಜಂಗಮರಿಂದ ದಲಿತರ ದರೋಡೆ

ವಿಚಾರ ಸಂಕಿರಣದಲ್ಲಿ ಸಾಹಿತಿ ಪ್ರೊ.ಆರ್.ಕೆ.ಹುಡಗಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:55 IST
Last Updated 21 ಮಾರ್ಚ್ 2023, 4:55 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ವಿಚಾರ ಸಂಕಿರಣವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಎಚ್.ಟಿ.ಪೋತೆ ಉದ್ಘಾಟಿಸಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ವಿಚಾರ ಸಂಕಿರಣವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಎಚ್.ಟಿ.ಪೋತೆ ಉದ್ಘಾಟಿಸಿದರು   

ಬೀದರ್‌: ‘ವೀರಶೈವ ಜಂಗಮರು ಮೀಸಲಾತಿ ಲಾಭಕ್ಕಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ದಲಿತರ ಹೊಟ್ಟೆ ಮೇಲೆ ಹೊಡೆದು ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಸಾಹಿತಿ ಪ್ರೊ.ಆರ್.ಕೆ.ಹುಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ‘ಸುಳ್ಳು ಜಾತಿ ಪ್ರಮಾಣಪತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ವೀರಶೈವ ಜಂಗಮರು ಮೀಸಲಾತಿ ಸೌಲಭ್ಯ ಕಬಳಿಸಲು ಅಸ್ಪೃಶ್ಯ ಜಾತಿಗೆ ಒಳಪಡುವ ಸುಳ್ಳು ಬೇಡ ಜಂಗಮ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಮೇಲ್ಜಾತಿಯವರಿಗೆ ಗೊತ್ತಿದ್ದರೂ ಮೌನವಹಿಸಿರುವುದು ಖಂಡನೀಯ. ಮೇಲ್ಜಾತಿಯವರು ಸತ್ಯದ ಪರವಾಗಿ ನಿಲ್ಲುವ ಕೆಲಸವನ್ನಾದರೂ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ವಿಚಾರ ಸಂಕಿರಣ ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಎಚ್.ಟಿ.ಪೋತೆ ಮಾತನಾಡಿ, ‘ಇಂದು ವೀರಶೈವ ಜಂಗಮರು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಘೋರ ಅನ್ಯಾಯವಾಗಿದೆ’ ಎಂದರು

ಸಾಹಿತಿ ಎಸ್.ಪಿ.ಸುಳ್ಳದ ಮಾತನಾಡಿ, ‘ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಶೋಷಿತರಿಗೆ ನ್ಯಾಯ ದೊರಕಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟಿ ಉಮಾ ವೈ.ಜಿ ಮಾತನಾಡಿ, ‘ಶೋಷಿತರ ಮೇಲೆ ನಿರಂತರವಾಗಿ ಅನ್ಯಾಯ, ದಬ್ಬಾಳಿಕೆ ನಡೆಯುತ್ತಿದೆ. ಸಾಮೂಹಿಕವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಮೂಲ ನಿವಾಸಿಗಳ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಸಹ ಹೈಜಾಕ್ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್ ಮಾತನಾಡಿ, ‘ನ್ಯಾಯ ನೀಡುವ ಸ್ಥಳದಲ್ಲಿ ಶೋಷಿತರು, ದಲಿತರು ಇರಬೇಕು ಅಂದಾಗ ಮಾತ್ರ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯವಿದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಶೋಷಿತರ ಕಲ್ಯಾಣಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ’ ಎಂದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅಧ್ಯಕ್ಷತೆ ವಹಿಸಿದ್ದರು. ದಸಂಸ ಹಿರಿಯ ಮುಖಂಡ ಸುರೇಶ, ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಫರ್ನಾಂಡೀಸ್, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಆರ್.ಪಿ.ಐ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್, ಬಾಬು ಟೈಗರ್, ಕಾಶಿನಾಥ ಚೆಲ್ವಾ, ರಾಜಕುಮಾರ ವಾಘಮಾರೆ, ಸುನೀಲ ಭಾವಿಕಟ್ಟಿ, ಗಾಲಿಬ್ ಹಾಸ್ಮಿ, ಸಂತೋಷ ಜೋಳದಾಪಗೆ, ಅಭಿ ಕಾಳೆ ಇದ್ದರು.

ಅಣ್ಣಾ ಭಾವು ಸಾಠೆ ಲೋಕ ಮಂಚ್ ಟ್ರಸ್ಟ್ ಉಪಾಧ್ಯಕ್ಷ ಸುಮಂತ್ ಕಟ್ಟಿಮನಿ ಸ್ವಾಗತಿಸಿದರು. ಅರುಣ್ ನಿರೂಪಿಸಿದರು ಎಂ.ಎಸ್.ಮನೋಹರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.