ADVERTISEMENT

ಹುಲಸೂರ ಬಂದ್ ಯಶಸ್ವಿ

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:10 IST
Last Updated 20 ನವೆಂಬರ್ 2025, 6:10 IST
ಹುಲಸೂರ ಪಟ್ಟಣದಲ್ಲಿ ಬುಧುವಾರ ಜಿಲ್ಲಾಧಿಕಾರಿ ಪರವಾಗಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಅವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು 
ಹುಲಸೂರ ಪಟ್ಟಣದಲ್ಲಿ ಬುಧುವಾರ ಜಿಲ್ಲಾಧಿಕಾರಿ ಪರವಾಗಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಅವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು    

ಹುಲಸೂರ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರ ಒಕ್ಕೂಟದಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಶಿವಾನಂದ ಸ್ವಾಮೀಜಿ, ‘ಬೀದರ್ ಜಿಲ್ಲೆಯಲ್ಲಿ ಹುಲಸೂರ ಗ್ರಾಮ ಪಂಚಾಯತಿ 2008ಕ್ಕಿಂತ ಮೊದಲು ವಿಧಾನಸಭಾ ಕ್ಷೇತ್ರವಾಗಿತ್ತು. ನಿರಂತರ ಹೋರಾಟದ ಫಲವಾಗಿ 2018ರಲ್ಲಿ ತಾಲ್ಲೂಕೂ ಕೇಂದ್ರವಾಗಿ ಘೋಷಣೆಯಾಗಿದೆ. ನಗರೀಕರಣ, ವ್ಯಾಪಾರೀಕರಣ ಮತ್ತು ಜನಸಂಚಾರ ತೀವ್ರಗತಿಯಲ್ಲಿ ಹೆಚ್ಚುತ್ತಿದೆ’ ಎಂದರು.

ಹುಲಸೂರ ತಾಲ್ಲೂಕ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಮಾತನಾಡಿ, ‘ಎಂ.ಪಿ.ಪ್ರಕಾಶ ಆಯೋಗದ ಶಿಫಾರಸಿನಂತೆ ಭಾಲ್ಕಿ ತಾಲ್ಲೂಕಿನ 18 ಹಳ್ಳಿಗಳು ಹಾಗೂ ಒಟ್ಟು 20 ಗ್ರಾ.ಪಂ ಹುಲಸೂರ ತಾಲ್ಲೂಕಿಗೆ ಸೇರುವುದು, ಮಿನಿ ವಿಧಾನಸೌಧ, ತಾಲ್ಲೂಕು ನ್ಯಾಯಾಲಯ ಕೆಲಸ ಪ್ರಾರಂಭಿಸಬೇಕು. ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಜಿಲ್ಲಾ ಉಸ್ತುವರಿ ಸಚಿವರಿಗೆ ಘೇರಾವ್ ಹಾಕಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಾಜಿ ಸದಸ್ಯ ಮಲ್ಲಪ್ಪಾ ಧಬಾಲೆ, ಸುಧೀರ ಕಾಡಾದಿ, ರೂಪಾವತಿ ಜಾಧವ, ಸೂರ್ಯಕಾಂತ ಚೆಲ್ಲಾಬಟ್ಟೆ, ಶ್ರೀಮಂತರಾವ್ ಜಾನಬಾ, ಸಿ.ಎನ್.ದಾವಳೆ, ನಾಗೇಶ ಮೇತ್ರೆ, ಶಿವರಾಜ ಖಪ್ಲೆ ಮಾತನಾಡಿದರು.

ಬಳಿಕ ಜಿಲ್ಲಾಧಿಕಾರಿ ಪರವಾಗಿ ಮನವಿ ಪತ್ರ ಪಡೆದು ಮಾತನಾಡಿದ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ‘ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ತಮ್ಮ ಬೇಡಿಕೆಗಳು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಮಾಜಿ ಸದಸ್ಯೆ ಶಾಲುಬಾಯಿ ಬನಸೂಡೆ, ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಲ್ಲೂಕು ಪಂಚಾಯಿತಿ ಇಒ ಮಹಾದೇವ ಜಮ್ಮು, ಸಿಪಿಐ ಅಲಿಸಾಬ್, ಪಿಎಸ್ಐ ಶಿವಪ್ಪ ಮೇಟಿ, ಪ್ರವೀಣ ಕಡಾದಿ, ಚಂದ್ರಕಾಂತ ಡೆಟ್ನೆ, ಅರವಿಂದ ಹರಪಲ್ಲೆ, ಮಹಾದೇವ ಕವಟೆ, ಶ್ರೀಶೈಲ ಹಾರಕುಡೆ, ಸುನಿಲ್ ಕಡಾದಿ, ಕೇದಾರ ಭೋಪಲೆ, ಸಂತೋಷ ಗಾಯಕವಾಡ, ಜಗದೀಶ ಡೇಟ್ನೆ, ನಾಗನಾಥ ತೊಗರಿಗೆ, ಸಿದ್ದು ಪಾರಶೆಟ್ಟಿ, ರಾಜಕುಮಾರ ತೊಂಡಾರೆ ಸೇರಿ ಗ್ರಾಮದ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.

ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಿಸಲು ಆಗ್ರಹಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್‌ ಮಾಡಿ ಬೆಂಬಲಿಸಿದರು

Quote - ಈ ಪ್ರದೇಶದ ವಿಸ್ತರಣೆ ಹಾಗೂ ಸಾರ್ವಜನಿಕ ಸೇವೆಗಳ ಬೇಡಿಕೆ ಪೂರೈಸಲು ಗ್ರಾಮ ಪಂಚಾಯತಿ ಪೂರಕವಾಗಿಲ್ಲ. ಹೀಗಾಗಿ ಚಳಿಗಾಲದ ಅಧಿವೇಶನಕ್ಕೂ ಮೊದಲು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸದೇ ಇದ್ದಲ್ಲಿ ಪೌರಾಡಳಿತ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು  ಶಿವಾನಂದ ಸ್ವಾಮೀಜಿ ಹುಲಸೂರ

ಸ್ವಯಂ ಪ್ರೇರಿತ ಬಂದ್; ಸಂಘಟನೆಗಳ ಬೆಂಬಲದೊಂದಿಗೆ ಮೆರವಣಿಗೆ  ಬುಧವಾರ ಬೆಳಗ್ಗೆ 9.40ಕ್ಕೆ ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠ ಅನುಭವ ಮಂಟಪ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ ಸಂತ ರಘುನಾಥ್ ಮಹಾರಾಜ ಸಂಸ್ಥಾನ ಮಠದ ಮುಂಭಾಗದಿಂದ ಭಾಲ್ಕಿ - ಬಸವಕಲ್ಯಾಣ ಮುಖ್ಯ ರಸ್ತೆ ಮೂಲಕ ತಹಶೀಲ್ದರ್ ಕಚೇರಿ ತಲುಪಿತು. ಅಲ್ಲಿನ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.  ವ್ಯಾಪಾರಸ್ಥರು ತಮ್ಮತಮ್ಮ ಅಂಗಡಿಗನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು. ಗ್ರಾಮ ಪಂಚಾಯತಿಯೊಂದಿಗೆ ತಾಲ್ಲೂಕು ಗ್ರಾಹಕರ ಸಂಘ ಟೋಕರಿ ಕೋಳಿ ಸಮಾಜ ಹರಳಯ್ಯ ಸಮಾಜ ದೇವರ ದಾಸಿಮಯ್ಯ ಜೀರ್ಣೋದ್ಧಾರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲಿಸಿ ಮನವಿ ಪತ್ರ ಸಲ್ಲಿಸಿದರು. ಸಿಪಿಐ ಅಲಿಸಾಬ್ ನೇತೃತ್ವದಲ್ಲಿ ಆಂಬುಲೆನ್ಸ್ ಸೇರಿ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.