ADVERTISEMENT

ಹುಲಸೂರ: ಕಳೆಗುಂದಿದ ಹೋಳಾ ಹಬ್ಬ ತಯಾರಿ

ಆಸಕ್ತಿ ಕುಂದಿದ್ದರೂ ಹಬ್ಬದ ಸಿದ್ಧತೆಯಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:32 IST
Last Updated 22 ಆಗಸ್ಟ್ 2025, 5:32 IST
ಹುಲಸೂರ ಪಟ್ಟಣದ ಅಂಗಡಿಗಳಲ್ಲಿ ಆಲಂಕಾರಿಕ ವಸ್ತುಗಳ ಖರೀದಿ ಮಾಡುತ್ತಿರುವ ರೈತರು
ಹುಲಸೂರ ಪಟ್ಟಣದ ಅಂಗಡಿಗಳಲ್ಲಿ ಆಲಂಕಾರಿಕ ವಸ್ತುಗಳ ಖರೀದಿ ಮಾಡುತ್ತಿರುವ ರೈತರು   

ಹುಲಸೂರ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಹೋಳಾ ಹಬ್ಬ ಆಚರಣೆಗೆ ಆಸಕ್ತಿ ಕುಂದಿದ್ದರೂ ಹೋಳಾ’ ಹಬ್ಬ ಸಂಭ್ರಮದಿಂದ ಬರಮಾಡಿಕೊಳ್ಳಲು ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ರೈತರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಕೃಷಿಕರು ಅವುಗಳನ್ನು ಪೂಜಿಸಿ ಗೌರವಿಸುತ್ತಾರೆ. ರಾಸುಗಳಿಗೆ ಗೌರವಿಸುವ ಸಲುವಾಗಿಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋಳಾ ಹಬ್ಬ ಆಚರಿಸಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಆಚರಣೆ ಜಿಲ್ಲೆಯ ಹುಲಸೂರ, ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ರೈತರಿಗೂ ಇದು ಅಚ್ಚುಮೆಚ್ಚಿನ ಹಬ್ಬ. ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ಪೋಳಾ (ಎತ್ತು) ಎಂದು ಕರೆಯುತ್ತಾರೆ. ನಮ್ಮಲ್ಲಿ ಹೋಳಾ ಎಂದು ಕರೆಯಲಾಗುತ್ತದೆ. ಇದೇ ರೀತಿಯ ಹಬ್ಬವನ್ನು ರಾಜ್ಯದ ಬೇರೆ ಬೇರೆ ಕಡೆ ಹಾಗೂ ಜಿಲ್ಲೆಯ ಕೆಲ ಕಡೆ ಕಾರಹುಣ್ಣಿಮೆ ಎಂದು ಆಚರಿಸುತ್ತಾರೆ. ಅದನ್ನು ಹುಣ್ಣಿಮೆಗೆ ಆಚರಿಸಿದರೆ ಹೋಳಾ ಅಮಾವಾಸ್ಯೆ ದಿನ ಆಚರಿಸುತ್ತಾರೆ.

ADVERTISEMENT

ಪಟ್ಟಣದ ಸುತ್ತಮುತ್ತಲಿನ ದೇವನಾಳ, ಮಾಚನಾಳ, ಮೀರಖಲ, ಮೆಹಕರ, ಜಮಖಂಡಿ, ಸೋಲ ದಾಪಕ, ಕೊಂಗಳಿ, ಅಟ್ಟರಗಾ, ಗುಂಜರಗಾ, ಆಳವಾಯಿ, ಸಾಯಗಾಂವ, ಕೋಟಮಾಳ, ಹಲಸಿ ತುಗಾಂವ, ಬೊಳೆಗಾಂವ, ನಾರದಾ ಸಂಗಮ, ಹಾಲಹಳ್ಳಿ ಸೇರಿದಂತೆ ಇತರೆಡೆ ಉತ್ತಮ‌ ಮಳೆಯಾಗಿದ್ದು, ಹಬ್ಬದ ಮೊದಲ ದಿನ ರೈತರು ವಿವಿಧ ರೀತಿಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ.

ಪಟ್ಟಣದ ವಿವಿಧೆಡೆ ಎದುರು ಹೋಳಾ’ ಹಬ್ಬ ನಿಮಿತ್ತ ಅಂಗಡಿಗಳನ್ನು ಹಾಕಲಾಗಿದೆ. ರೈತರು ಬಣ್ಣ ಬಣ್ಣದ ಜೂಲಾ, ಮಗಡಾ, ಹಣಿಗೆಜ್ಜಿ, ಬಾರಕೋಲು, ಹಣಿ ಪಟ್ಟಿ, ಗಂಟೆಸರ ಇತ್ಯಾದಿ ವಸ್ತುಗಳ ಖರೀದಿಸುವಲ್ಲಿ ನಿರತರಾಗಿದ್ದಾರೆ.

‘ಎತ್ತು, ದನ, ಕರುಗಳು ಕಡಿಮೆಯಾಗುತ್ತಿರುವ ಕಾರಣ ರೈತರ ಹಬ್ಬಗಳಾದ ಹೋಳಾ ಹಬ್ಬ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆ, ಎಳ್ಳು ಅಮಾವಾಸ್ಯೆ ಹಬ್ಬಗಳ ಸಂಭ್ರಮವೂ ಅಷ್ಟಾಗಿ ಕಂಡುಬರುತ್ತಿಲ್ಲ. ರಾಸುಗಳಿಲ್ಲದೆ ಭೂಮಿಯ ಫಲವತ್ತತೆಗೆ ಅಗತ್ಯವಿರುವ ಕೊಟ್ಟಿಗೆ ಗೊಬ್ಬರವೇ ಇಲ್ಲದಂತಾಗಿದೆ’ ಎಂದು ರೈತ ಸಂಗಣ್ಣಾ ನಳಗಿರೆ ನೋವಿನಿಂದ ನುಡಿದರು.

ಈ ವರ್ಷದ ಮಳೆ ಚೆನ್ನಾಗಿ ಬಂದು ಉತ್ತಮ ಫಸಲು ದೊರೆಯಲಿ ಎಂದು ಹಬ್ಬದಲ್ಲಿ ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದು ರೈತರಾದ ನವನಾಥ ಮೇತ್ರೆ, ದಯಾನಂದ ಸೋನಫುಲೆ ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನ | ಔರಾದ್ ಕಮಲನಗರ ತಾಲ್ಲೂಕಿನ ರೈತರಿಗೂ ಅಚ್ಚುಮೆಚ್ಚಿನ ಹಬ್ಬ
ಎತ್ತುಗಳನ್ನು ಸಿಂಗರಿಸಿ ಪೂಜಿಸಿ ಅವುಗಳಿಂದ ಕೃಷಿ ಕಾರ್ಯ ಮಾಡಿಸುವ ‘ಹೋಳಾ’ ಹಬ್ಬ ಪ್ರಸಕ್ತ ವರ್ಷದ ಮಳೆ ಕಳೆ ತಂದಿದೆ.
ಮಲ್ಲಿಕಾರ್ಜುನ ಸ್ವಾಮಿ ಪ್ರಗತಿಪರ ರೈತ
ಕಳೆದ ವರ್ಷ ಆದಷ್ಟು ವ್ಯಾಪಾರವೂ ಈ ವರ್ಷ ಆಗಿಲ್ಲ. ಎತ್ತುಗಳ ಸಿಂಗರಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ
ದೇವೇಂದ್ರ ಭೋಪಳೆ  ಆಲಂಕಾರಿಕ ಸಾಮಗ್ರಿಗಳ ವ್ಯಾಪಾರಿ

ಬೆಲೆ ಏರಿಕೆ ಬಿಸಿ

ಈ ಸಲ ಹೋಳಾ’ ಹಬ್ಬ ನಿಮಿತ್ತ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಮಗಡಾ ₹ 120 ರಿಂದ 150 ಮೂಗದಾಣಿ ₹ 40-60 ದಾಂಡ ₹140-150 ಮಗಡಾ ಗೆಜ್ಜಿ ₹550-600 ಹಗ್ಗ ₹60-100 ಗೊಂಡೆ ₹100-120 ಹಣಿಕಟ್ ₹ 250-300 ಗೆಜ್ಜೆ ಕಟ್ ₹ 900-1000ಕ್ಕೆ ಮಾರಾಟವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.