ADVERTISEMENT

ಹುಲಸೂರ: ಗ್ರಾಮ ಲೆಕ್ಕಾಧಿಕಾರಿ ಕಟ್ಟಡ ಶಿಥಿಲ; ಆತಂಕದಲ್ಲಿಯೇ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:22 IST
Last Updated 8 ನವೆಂಬರ್ 2025, 5:22 IST
ಹುಲಸೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್‌ ಜಿ ಜನಸ್ನೇಹಿ ಕಚೇರಿಯ ಕಟ್ಟಡದ ಹೊರನೋಟ
ಹುಲಸೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್‌ ಜಿ ಜನಸ್ನೇಹಿ ಕಚೇರಿಯ ಕಟ್ಟಡದ ಹೊರನೋಟ   

ಹುಲಸೂರ: ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್‌ ಜನಸ್ನೇಹಿ ಕಚೇರಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿಯು ಆತಂಕದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.

ತಾಲ್ಲೂಕು ದಂಡಾಧಿಕಾರಿ ಕಚೇರಿ ನಂತರ ಅತಿ ಹೆಚ್ಚು ಜನರು ಭೇಟಿ ಕೊಡುವ ನಾಡ ಕಚೇರಿಯನ್ನು ತಾಲ್ಲೂಕು ಘೋಷಣೆ ಬಳಿಕ ಪ್ರವಾಸಿ ಮಂದಿರದಲ್ಲಿ ಆರಂಭಿಸಲಾಗಿತ್ತು. ಆದರೆ, ತೀರಾ ಹಳೆಯದಾಗಿದ್ದು, ಕಟ್ಟಡ ಕುಸಿಯುವ ಹಂತದಲ್ಲಿದೆ.

ಕಟ್ಟಡದ ಚಾವಣಿ ಸಂಪೂರ್ಣವಾಗಿ ಉದುರಿ ಹೋಗಿದ್ದು, ಕಬ್ಬಿಣದ ಸರಳುಗಳು ಅಸ್ಥಿ-ಪಂಜರದಂತೆ ತೇಲಿಕೊಂಡಿವೆ. ಎಲ್ಲ ಗೋಡೆಗಳು ಬಿರುಕುಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿವೆ. ಕಟ್ಟಡದ ಮೇಲೆ ನಾನಾ ಬಗೆಯ ಗಿಡಮರ ಬೆಳೆದಿವೆ.

ADVERTISEMENT

ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಕಚೇರಿ ವ್ಯವಹಾರಗಳಿಗಾಗಿ ಈ ಕಟ್ಟಡವನ್ನು ಬಳಸುತ್ತಿದ್ದರೂ ಚಾವಣಿ ಸಿಮೆಂಟ್ ಹಾಗೂ ಮರಳು ಸದಾ ಕೆಳಗೆ ಉದುರುತ್ತಿದೆ. ಕಚೇರಿ ಒಳಗಿನ ನೆಲಹಾಸಿಗೆ ಸಿಮೆಂಟ್ ಹಾಕಲಾಗಿತ್ತಾದರೂ ಇಡೀ ಸಿಮೆಂಟ್ ಎದ್ದು ಗುಂಡಿಮಯವಾಗಿದೆ. ಕಚೇರಿ ಒಳಗೆ ಆಸನ ಹಾಕಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಾಂಪೌಂಡ್ ಕಬ್ಬಿಣದ ಗೇಟ್ ಬಿಟ್ಟರೆ ಉಳಿದ ಇಡೀ ಕಾಂಪೌಂಡ್ ಸೀಳಿಕೊಂಡು, ಸಿಮೆಂಟ್ ಉದುರಿ ಬೀಳುವ ಹಂತಕ್ಕೆ ತಲುಪಿದೆ. ಕಾಂಪೌಂಡ್ ಒಳಗೆ ಪೊದೆಗಳಂತೆ ಗಿಡಗಂಟಿ ಬೆಳೆದಿದೆ. ಹಾವು ಮತ್ತು ಇತರ ವಿಷಜಂತುಗಳ ತಾಣವಾಗಿದೆ.

‘ಕಟ್ಟಡ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಲಸೂರನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದರೆ ಗ್ರಾಮದ ಅಭಿವೃದ್ಧಿಗೂ ನೆರವಾಗಲಿದೆ’ ಎಂದು ಗ್ರಾಮಸ್ಥ ನಾಗೇಶ ಮೇತ್ರೆ ತಿಳಿಸಿದರು.

‘ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನುದಾನ ಸಿಕ್ಕಿಲ್ಲ. ಮುಂದೆ ಪರಿಶೀಲಿಸಿ, ಕಟ್ಟಡದ ಕುರಿತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.

ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ಕಟ್ಟಡದಲ್ಲಿನ ಸಣ್ಣಪುಟ್ಟ ದುರಸ್ತಿ ಕಾರ್ಯ ಕೂಡಲೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ..
–ಶಿವಾನಂದ ಮೇತ್ರೆ, ಹುಲಸೂರ ತಹಶೀಲ್ದಾರ್
ಇಲ್ಲಿನ ನಾಡಕಚೇರಿ ಶಿಥಿಲಗೊಂಡಿದ್ದು ಮೂಲಸೌಕರ್ಯವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿತಪಿಸುವಂತಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯ ಶೌಚಾಲಯವಿಲ್ಲ.
–ಅಜಿತ್ ಸೂರ್ಯವಂಶಿ, ಲಹೂಜಿ ಶಕ್ತಿ ಸೇನೆ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.