ಹುಮನಾಬಾದ್: ಸರ್ಕಾರಿ ಆಸ್ಪತ್ರೆಗಳನ್ನು ಕಂಡರೆ ಮೂಗು ಮುರಿಯುವವರೇ ಹೆಚ್ಚು. ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಮೂಲಸೌಲಭ್ಯಗಳನ್ನು ಹೊಂದಿದೆ. ಆದರೆ, ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಮಾತ್ರ ಹಿಂದೆ ಬಿದ್ದಿದೆ!
‘ಚಿಕಿತ್ಸೆಗೆ ಬರುವ ರೋಗಿಗಳಿಗೆ ಅಲ್ಪಸ್ವಲ್ಪ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ’ ಎಂಬ ಆರೋಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೆಲವು ವೈದ್ಯರ ಮೇಲಿದೆ.
ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಕೋಣೆ, ತುರ್ತು ನಿಗಾ ಘಟಕ ಸೇರಿದಂತೆ ಎಲ್ಲ ರೀತಿ ಸೌಲಭ್ಯ ಇದ್ದರೂ ಹಣದ ಆಸೆಗೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡುತ್ತಿದ್ದಾರೆ! ‘ಆಸ್ಪತ್ರೆಯ ಕೆಲವು ಕಾಯಂ ವೈದ್ಯರೇ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದಿದ್ದಾರೆ. ಸರ್ಕಾರದ ನಿಯಮ ಗಾಳಿಗೆ ತೂರಿ ಇಂತಹ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಸಮಯಕ್ಕೆ ಸಿಗುವುದಿಲ್ಲ. ಈ ಬಗ್ಗೆ ಅನೇಕ ಬಾರಿ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲೂ ಚರ್ಚೆಯಾಗಿದೆ. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಸಹ ‘ಇಂತಹ ದೂರುಗಳು ಬರುತ್ತಿವೆ’ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂಬ ಆರೋಪಗಳಿವೆ.
ಈ 100 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯು 27 ನರ್ಸ್, 30 ‘ಡಿ’ ಗ್ರೂಪ್ ನೌಕರರನ್ನು ಹೊಂದಿದೆ. ಇಲ್ಲಿ ಇಸಿಜಿ, ಎಕ್ಸರೆ, ಡಯಾಲಿಸಿಸ್ ಘಟಕ, ಶಸ್ತ್ರಚಿಕಿತ್ಸಾ ಕೊಠಡಿ, ಕಣ್ಣಿನ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ಸೌಲಭ್ಯಗಳಿರುವ ಪ್ರಯೋಗಾಲಯಗಳೂ ಇವೆ.
ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಮೂತ್ರ ಪಿಂಡರೋಗಗಳ ತಜ್ಞರು, ಎದೆರೋಗ ತಜ್ಞರು, ಕೀಲು ಮತ್ತು ಮೂಳೆ ರೋಗ ತಜ್ಞರು, ಮಕ್ಕಳ ತಜ್ಞರು, ಕಿವಿ, ಮೂಗು, ಗಂಟಲು ರೋಗಗಳ ತಜ್ಞರು, ಕ್ಷ–ಕಿರಣ ತಜ್ಞರು, ಮಾನಸಿಕರೋಗ ತಜ್ಞರು ಸೇರಿದಂತೆ ಒಟ್ಟು 10 ವೈದ್ಯರಿದ್ದಾರೆ. ಆದರೆ, ಸಂಪೂರ್ಣ ಸೇವೆಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.
‘ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ಒಳಗೊಂಡಿರುವ ಹುಮನಾಬಾದ್ ತಾಲ್ಲೂಕಿನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತವೆ. ಆಸ್ಪತ್ರೆಯಲ್ಲಿ ರಾತ್ರಿ ಸಂದರ್ಭದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ’ ಎಂಬುದು ಜನರ ಆರೋಪ.
ಹತ್ತಾರು ಸೌಲಭ್ಯಗಳ ಫಲವಾಗಿ ‘ಲಕ್ಷ’ ಕಾರ್ಯಕ್ರಮದಡಿ ರಾಷ್ಟ್ರಮಟ್ಟದ ಪ್ರಶಸ್ತಿ ಈ ಆಸ್ಪತ್ರೆಗೆ ಬಂದಿದೆ. ರಾಜ್ಯಮಟ್ಟದಲ್ಲಿ ಕಾಯಕಲ್ಪ ಪ್ರಶಸ್ತಿಯೂ ಸಂದಿದೆ.
ತಾಲ್ಲೂಕಿನ ದುಬಲಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಎಂಬಿಬಿಎಸ್ ವೈದ್ಯರಿಲ್ಲದ ಕಾರಣ ರೋಗಿಗಳು ಪರದಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಗ್ರಾಮಗಳ ಜನರು ಈ ಆಸ್ಪತ್ರೆ ಅವಲಂಬಿಸಿದ್ದಾರೆ. ವೈದ್ಯರಿಲ್ಲದ ಕಾರಣಕ್ಕೆ ಹುಮನಾಬಾದ್ ಅಥವಾ ಹಳಿಖೇಡ್ ಬಿ. ಪಟ್ಟಣಗಳಿಗೆ ಹೋಗವ ಅನಿವಾರ್ಯತೆ ಬಂದಿದೆ’ ಎಂಬುದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಭೋಜಗುಂಡಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.