ಬೀದರ್: ಇನ್ನೂ ಸೂರ್ಯ ಕಣ್ಣು ಬಿಟ್ಟಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ನಗರದ ನೆಹರೂ ಕ್ರೀಡಾಂಗಣದಲ್ಲಿ ಚಲನವಲನ ಆರಂಭಗೊಂಡಿತು. ಮೈಚಳಿ ಬಿಟ್ಟು ಜನ ಶಿಸ್ತಿನಿಂದ ಸಾಲಿನಲ್ಲಿ ಕುಳಿತು, ವಿವಿಧ ಬಗೆಯ ಆಸನಗಳನ್ನು ಮಾಡಿದರು.
ಇಂಟರ್‌ನ್ಯಾಷನಲ್ ನ್ಯಾಚುರೋಪಥಿ ಆರ್ಗನೈಜೇಶನ್, ಸೂರ್ಯ ಫೌಂಡೇಷನ್ ಹಾಗೂ ಆಯುಷ್ ಇಲಾಖೆಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಮಹೋತ್ಸವದಲ್ಲಿ ಕಂಡ ದೃಶ್ಯಗಳಿವು.
ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಮಧ್ಯ ವಯಸ್ಕರು, ಹಿರಿಯರು ಕೂಡ ಭಾಗವಹಿಸಿದರು. ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕದ ಪ್ರಮುಖ ಭವರಲಾಲ್ ಆರ್ಯ ಯೋಗ ಹೇಳಿಕೊಟ್ಟರು.
ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಆಡಳಿತ ಮಂಡಳಿ ಸದಸ್ಯ ಅನಂತ ಬಿರಾದಾರ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿ. ಎಲ್ಲರೂ ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಬಗ್ಗೆ ಜನರಿಗೆ ಆರೋಗ್ಯಕರ ಜೀವನ ನಡೆಸಲು ಅನೇಕ ಜಾಗೃತಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಈ ಯೋಗ ಮಹೋತ್ಸವ ಕಾರ್ಯಕ್ರಮ ಪ್ರಮುಖವಾಗಿದೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ರೋಗ ಮುಕ್ತ, ಸ್ವಸ್ಥ-ಸುಸ್ಥಿರ ಹಾಗೂ ಸಶಕ್ತ ಸಮಾಜ ನಿರ್ಮಾಣಕ್ಕೆ ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ವಿಶ್ವದ ಅನೇಕ ರಾಷ್ಟ್ರಗಳು ಯೋಗದ ಮೊರೆ ಹೋಗುತ್ತಿವೆ. ಇದಕ್ಕೆ ಭಾರತದ ಕೊಡುಗೆ ಅಪಾರವಾದುದು. ಕಾಯಕದ ಜೊತೆಗೆ ಯೋಗ, ಧ್ಯಾನ, ಭಜನೆ ಮಾಡಬೇಕು ಎಂದು ತಿಳಿಸಿದರು.
ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಯೋಗವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ನಮಲ್ಲಿ ಕಾಣಿಸಿಕೊಳ್ಳುವ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ. ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆಯಿಂದ ಇದು ಸಾಧ್ಯ. ಆಧುನಿಕ ಒತ್ತಡದ ಬದುಕಿನಲ್ಲಿ ಬಹುತೇಕರಿಗೆ ಜೀವನವೇ ಸಾಕು ಎಂಬ ಭಾವ ಮೂಡುತ್ತಿದೆ. ಯೋಗ ಈ ಎಲ್ಲ ಒತ್ತಡಗಳನ್ನು ತಡೆದು ಮನಸ್ಸು ಪ್ರಶಾಂತಗೊಳಿಸುತ್ತದೆ ಎಂದು ಹೇಳಿದರು.
ಭವರಲಾಲ್ ಆರ್ಯ ಅವರಿಗೆ ‘ಯೋಗರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೆಹಲಿಯ ತ್ರಿಭುವನ್ ಸಿಂಗ್ ಅವರು ಕೊಳಲು ವಾದನ, ಸಿದ್ದರಾಮೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು, ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಹುಮನಾಬಾದ ಯೋಗ ಶಿಕ್ಷಕ ಆನಂದ ಹಾಗೂ ಈಶಾನಿ ಮುಚಳಂಬೆ ಅವರು ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಋಷಿ ದೇವವೃತ, ಶಂಕರಲಿಂಗ ಸ್ವಾಮೀಜಿ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಎಮ್.ಜಿ ಮುಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಐಎನ್ಒ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಯದಲಾಪುರೆ, ಜಿಲ್ಲಾಧ್ಯಕ್ಷ ಗೋರಖನಾಥ ಕುಂಬಾರ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಸಂಚಾಲಕಿ ಮಂಜುಳಾ ಮುಚಳಂಬೆ, ಬಾಬು ವಾಲಿ, ಪೂರ್ಣಿಮಾ ಜಿ., ರೂಪೇಶ ಎಕಲಾರಕರ್, ಚಂದ್ರಕಾಂತ ಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.