ADVERTISEMENT

ಕಾಂಗ್ರೆಸ್‌ ಅಧಿಕಾರ ದಾಹ ನಿಂತಿಲ್ಲ: ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 15:47 IST
Last Updated 16 ಆಗಸ್ಟ್ 2021, 15:47 IST
ಬೀದರ್‌ನ ಪ್ರತಾಪನಗರದ ಘಾಳೆ ಫಂಕ್ಷನ್‌ ಹಾಲ್‌ನಲ್ಲಿ ಸೋಮವಾರ ನಡೆದ ‘ಜನಾಶೀರ್ವಾದ ಯಾತ್ರೆ’ ಕಾರ್ಯಕ್ರಮದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿದರು
ಬೀದರ್‌ನ ಪ್ರತಾಪನಗರದ ಘಾಳೆ ಫಂಕ್ಷನ್‌ ಹಾಲ್‌ನಲ್ಲಿ ಸೋಮವಾರ ನಡೆದ ‘ಜನಾಶೀರ್ವಾದ ಯಾತ್ರೆ’ ಕಾರ್ಯಕ್ರಮದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿದರು   

ಬೀದರ್‌: ‘ಕಾಂಗ್ರೆಸ್‌ ಅಧಿಕಾರ ದಾಹ ನಿಂತಿಲ್ಲ. ಲೋಕಸಭೆಯಲ್ಲಿ ಕೇವಲ 55 ಸ್ಥಾನಗಳನ್ನು ಪಡೆದರೂ ಸದನ ನಡೆಸಲು ಅಡ್ಡಿ ಪಡಿಸುತ್ತಿದೆ. ದೇಶದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ’ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.

ಇಲ್ಲಿಯ ಪ್ರತಾಪನಗರದ ಘಾಳೆ ಫಂಕ್ಷನ್‌ ಹಾಲ್‌ನಲ್ಲಿ ಸೋಮವಾರ ನಡೆದ ‘ಜನಾಶೀರ್ವಾದ ಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರ ಕಷ್ಟಗಳನ್ನು ಆಲಿಸಿ ಅವರ ಬದುಕು ಹಸನು ಮಾಡುವುದು ರಾಜಕಾರಣದ ಉದ್ದೇಶವಾಗಬೇಕು. ಅಂದಾಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯವಿದೆ’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲ ಜಾತಿ, ಸಮುದಾಯಗಳ 39 ಸಂಸದರಿಗೆ ಹೊಸದಾಗಿ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅವಕಾಶ ದೊರಕಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಸತತ ಐದು ಗಂಟೆಗಳ ಕಾಲ ಜನ ಸನ್ಮಾನ ಮಾಡಿದ್ದಾರೆ. ಬಿಜೆಪಿಗೆ ದೊರೆಯುತ್ತಿರುವ ಜನ ಬೆಂಬಲ ನೋಡಿ ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿ ನಡುಕ ಹುಟ್ಟಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರು ಬಿಜೆಪಿ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಲು ಪ್ರಯತ್ನಿಸಿದರು. ಆಡಳಿತ ಪಕ್ಷದಲ್ಲಿರುವ ನಮಗೆ ಜವಾಬ್ದಾರಿಯ ಅರಿವಿದೆ. ಕೋವಿಡ್‌ ನಿಯಮ ಪಾಲಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದು ತಿರುಗೇಟು ನೀಡಿದರು.

‘ಮೋದಿ ಅವರು ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ದೇಶದ ಜನರಿಗೆ ವಿವಿಧ ರೀತಿಯ ಲಾಭ ದೊರಕುವಂತೆ ಮಾಡಿದ್ದಾರೆ’ ಎಂದರು.

‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಲು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಟಿಕೆಟ್‌ ಹಂಚಿಕೆಯಲ್ಲಿ ಪ್ರತಿಯೊಂದು ಜನ ಸಮುದಾಯದ ಹಿತ ಕಾಪಾಡಬೇಕು’ ಎಂದು ಹೇಳಿದರು.

ದೇಶ ಲೂಟಿ ಕಾಂಗ್ರೆಸ್‌ ಕೆಲಸ:ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿ, ‘ಭಗವಂತ ಖೂಬಾ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಏಳು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು ಎಂದು ಕರೆಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಅವರ ವಿರುದ್ಧ ಅನಗತ್ಯ ಟೀಕೆ ಮಾಡಿದೆ. ದೇಶ ಹಾಗೂ ವ್ಯಕ್ತಿ ಲೂಟಿ ಕಾಂಗ್ರೆಸ್‌ನ ಕೆಲಸವಾಗಿದೆ’ ಎಂದು ಟೀಕಿಸಿದರು.

‘ಔರಾದ್‌ ಮೂಲದ ಒಬ್ಬರು ಕೇಂದ್ರ ಸಚಿವರಾದರೆ, ಇನ್ನೊಬ್ಬರು ರಾಜ್ಯದ ಸಚಿವರು. ಖೂಬಾ ಹಾಗೂ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಖಾತೆ ತೆರೆಯದಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಹಿರಿಯ ಮುಖಂಡರಾದ ಗುರುನಾಥ ಕೊಳ್ಳೂರ್, ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರ್‌ಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ಸೋಮನಾಥ ಪಾಟೀಲ, ಅರಹಂತ ಸಾವಳೆ, ಬಾಬುರಾವ್‌ ಕಾರಭಾರಿ, ಹಣಮಂತ ಬುಳ್ಳಾ, ಡಿ.ಕೆ.ಸಿದ್ರಾಮ, ಗುರುನಾಥ ಜ್ಯಾಂತಿಕರ್, ರೇವಣಸಿದ್ದಪ್ಪ ಜಲಾದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.