ADVERTISEMENT

ಬೀದರ್: ಕುಷ್ಠರೋಗಿಗಳನ್ನು ಗುರುತಿಸಿ, ಚಿಕಿತ್ಸೆ ಕೊಡಿಸಿ

ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗೂರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 15:44 IST
Last Updated 20 ಜುಲೈ 2021, 15:44 IST
ಬೀದರ್‌ನಲ್ಲಿ ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗೂರೆ ಉದ್ಘಾಟಿಸಿದರು. ವೀರಶೆಟ್ಟಿ ಚನಶೆಟ್ಟಿ, ಡಾ.ಅಭಿಜೀತ್ ಪಾಟೀಲ, ಡಾ.ಮಹೇಶ ಬಿರದಾರ ಇದ್ದಾರೆ
ಬೀದರ್‌ನಲ್ಲಿ ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗೂರೆ ಉದ್ಘಾಟಿಸಿದರು. ವೀರಶೆಟ್ಟಿ ಚನಶೆಟ್ಟಿ, ಡಾ.ಅಭಿಜೀತ್ ಪಾಟೀಲ, ಡಾ.ಮಹೇಶ ಬಿರದಾರ ಇದ್ದಾರೆ   

ಬೀದರ್: ‘ಕುಷ್ಠರೋಗ ನಿರ್ಮೂಲನೆ ಹಂತದಲ್ಲಿದೆ. ಆದರೂ ಅಲ್ಲಲ್ಲಿ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ರೋಗದ ಲಕ್ಷಣಗಳ ಆಧಾರದ ಮೇಲೆ ಅಂಥವರನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕಾಗಿದೆ’ ಎಂದು ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗೂರೆ ಹೇಳಿದರು.

ಇಲ್ಲಿಯ ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ನೇಮಕಗೊಂಡ ಆರೋಗ್ಯ ಅಧಿಕಾರಿಗಳಿಗೆ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಿಳಿಬಿಳಿ ತಾಮ್ರ ಬಣ್ಣದ ಮಚ್ಚೆ ಇದ್ದರೆ ಸ್ಪರ್ಶಜ್ಞಾನ ಇರುವುದಿಲ್ಲ. ಬೆವರುವುದೂ ಇಲ್ಲ. ರೋಗಿಯು ಸೀನಿದಾಗ, ಕೆಮ್ಮಿದಾಗ ರೋಗಾಣುಗಳು ಹೊರಬಂದು ಗಾಳಿಯಲ್ಲಿ ಹರಡಿ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿ ಅಥವಾ ಮಕ್ಕಳಲ್ಲಿ ಸೇರಿಕೊಳ್ಳುತ್ತವೆ’ ಎಂದು ತಿಳಿಸಿದರು.

ADVERTISEMENT

‘ಕುಷ್ಠರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಬಹು ಔಷದಿ ಚಿಕಿತ್ಸೆಯಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಇದು ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದೆ. ದೇಹದ ಮೇಲೆ ಯಾವುದೇ ತರಹದ ಮಚ್ಚೆಗಳು ಇದ್ದಲ್ಲಿ ಅದನ್ನು ಪರೀಕ್ಷಿಸಿ ಅವರಿಗೆ ಸೂಕ್ತ ಚಿಕಿತ್ಸೆಗಾಗಿ ಸಲಹೆ ನೀಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಡಾ.ಮಹೇಶ ಬಿರಾದಾರ ಮಾತನಾಡಿ, ‘ಬಹು ಔಷಧಿ ಚಿಕಿತ್ಸೆಯಿಂದ ಕುಷ್ಠರೋಗ ಗುಣಪಡಿಸಬಹುದು. ಈ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು’ ಎಂದು ಹೇಳಿದರು.

‘ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಬೇಕಿದೆ’ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನಶೆಟ್ಟಿ, ‘ಕುಷ್ಠರೋಗ ಬಹಳ ಪುರಾತನವಾದದ್ದು. 1873ರಲ್ಲಿ ನಾರ್ವೆಯ ವಿಜ್ಞಾನಿ ಡಾ.ಹೆನ್ಸ್‌ನ್ ಪತ್ತೆ ಹಚ್ಚಿದರು. ಮೈಕ್ರೊ ಬ್ಯಾಕ್ಟರಿಯಾ ಲೆಪ್ರೆ ಎಂಬ ರೋಗಾಣುವಿನಿಂದ ಹರಡುತ್ತದೆ. ಇಂದು ಎಲ್ಲ ಬಗೆಯ ಔಷಧಗಳು ಲಭ್ಯವಿದ್ದು, ಗುಣಪಡಿಸಲು ಸಾಧ್ಯವಿದೆ’ ಎಂದು ಹೇಳಿದರು.

ಮನೋರೋಗ ತಜ್ಞ ಡಾ.ಅಭಿಜೀತ್ ಪಾಟೀಲ, ರಾಜೇಶ, ಶಾಮರಾವ್, ಗಂಗಾಧರ, ಮಲ್ಲಿಕಾರ್ಜುನ, ಇಮಾನುವೆಲ್ ಹಾಗೂ ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.