ADVERTISEMENT

‘ಸಂಸ್ಕೃತಿಯ ಪ್ರತೀಕ, ಹಾಲುಮತದ ಇತಿಹಾಸ’

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:51 IST
Last Updated 4 ಮೇ 2025, 15:51 IST
ಸೈದಾಪುರ ಸಮೀಪದ ಬಾಡಿಯಾಳ ಗ್ರಾಮದಲ್ಲಿ ನೂತನ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸೈದಾಪುರ ಸಮೀಪದ ಬಾಡಿಯಾಳ ಗ್ರಾಮದಲ್ಲಿ ನೂತನ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.   

ಬಾಡಿಯಾಳ(ಸೈದಾಪುರ): ಹಾಲುಮತ ಸಮಾಜ ಶ್ರಮ, ಸಂಸ್ಕೃತಿಯ ಪ್ರತೀಕ. ಹಾಲುಮತದ ಇತಿಹಾಸವು ಮನುಕುಲದ ಇತಿಹಾಸವಾಗಿದೆ ಎಂದು ಆಗುತೀರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಹೇಳಿದರು.

ಸಮೀಪದ ಬಾಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದ ಭೀರಲಿಂಗೇಶ್ವರ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆಯಲ್ಲಿ ಏಳು ದೇವರುಗಳ ಪಲ್ಲಕ್ಕಿಗಳು ಸಮಾಗಮವಾಗಿವೆ. ದೇವರುಗಳ ಪಟ್ಟದ ಪೂಜಾರಿಗಳು, ಹಲವು ಪರಮಪೂಜ್ಯರು ಭಾಗವಹಿಸಿದ್ದಾರೆ. ಭರತಭೂಮಿ ಮಹಾನ್‌ ಸಂತ, ಶರಣರ ಜನ್ಮ ಹಾಗೂ ತಪಸ್ಸಿನ ಪುಣ್ಯಸ್ಥಳವಾಗಿದೆ. ಅವರ ಸದ್ಗುಣಗಳನ್ನು ನಿತ್ಯ ಪಾಲಿಸಬೇಕು. ಬಡವ ಮತ್ತು ಸದಾ ಶ್ರಮ ಜೀವಿಗಳಾದ ನಮ್ಮ ಸಮುದಾಯ ಮೂಢನಂಬಿಕೆಗೆ ಬಲಿಯಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದನ್ನು ನಿಲ್ಲಿಸಿ, ಜಾಗರುಕತೆಯಿಂದ ಮಕ್ಕಳ ಶಿಕ್ಷಣಕ್ಕೆ ಖರ್ಚುಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಹೇಳಿದರು.

ADVERTISEMENT

ನಂತರ ಬೆಳಗಾವಿಯ ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ‘ಕಾಯಕವೇ ಕೈಲಾಸವೆಂದು ನಂಬಿ ಕೃಷಿ, ಕುರಿ ಸಾಕಾಣಿಕೆ, ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಲಿನಂತ ಮನಸ್ಸುಳ್ಳ ಹಾಲುಮತ ಸಮಾಜದ ಸಂಸ್ಕೃತಿ ಶ್ರೇಷ್ಠವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನೆಗೊಬ್ಬ ರಾಯಣ್ಣ ಜನಿಸಲಿ, ಹರಿದು ಹೋಗದ ಕಂಬಳಿ, ಹಳಸಿ ಹೋಗಲಾರದ ಅಂಬಲಿ, ಎಲ್ಲರ ಮನೆಗೆ ನೀಗಲಿ, ಈ ಗ್ರಾಮಕ್ಕೆ ಹಾಲಿನ ಹೊಳೆ ಹರಿಯಲಿ, ಮುತ್ತಿನ ಮಳೆ ಸುರಿಯಲಿ’ ಎಂದು ಹಾರೈಸಿದರು.

ನಂತರ ಹುಲಜಂತಿ ಪಟ್ಟದ ಗುರುಕಾಳಿಂಗರಾಯ ಮಹಾರಾಜರು ಮಾತನಾಡಿ, ‘ದೇವಸ್ಥಾನದಲ್ಲಿ ನಿರಂತರವಾಗಿ ಸತ್ಸಂಗ ಕಾರ್ಯಕ್ರಮಗಳು ನಡೆಯಬೇಕು. ಭಗವಂತ ಭೀರಲಿಂಗೇಶ್ವರ ಕೀರ್ತನೆಗಳು, ಮಾಳಿಂಗರಾಯರ ಚರಿತೆಗಳು, ಬಸವಾದಿ ಶರಣರ ತತ್ವಗಳು, ರಾಯಣ್ಣನ ಆದರ್ಶಗಳು, ಕನಕಸದಾಸರ ಕೀರ್ತನೆಗಳ ಬೋಧನೆ ಮಾಡಿಕೊಂಡು ಬಂದು ಮಹಾತ್ಮರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇವಸ್ಥಾನ ನಿರ್ಮಾಣ ಮಾಡಿದ್ದು ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಕನಕ ಗುರುಪೀಠ ತಿಂಥಣಿ ಬ್ರಿಜ್ ಕಲಬುರಗಿ ವಿಭಾಗದ ಸಿದ್ದರಾಮಾನಂದಪುರಿ ಸ್ವಾಮೀಜಿ, ಚೇಗುಂಟಾ ಕ್ಷೀರಲಿಂಗೇಶ್ವರ ಸ್ವಾಮೀಜಿ, ಮಠಮಾರಿ ಶಿವಾನಂದ ಮಠದ ಜ್ಞಾನಾನಂದ ಸ್ವಾಮೀಜಿ, ತಂಗಡಗಿ ಆಂಜನೇಯ ಶರಣು, ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ನ ಲಿಂಗಭೀರದೇವರು ಸಾನ್ನಿಧ್ಯ ವಹಿಸಿದ್ದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಪಾಟೀಲ ಅನಪೂರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶರಣಿಕ ಕುಮಾರ ದೋಕಾ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರು, ಮಾಜಿ ಅಧ್ಯಕ್ಷ ಕೆ.ವಿಶ್ವನಾಥ ನೀಲಹಳ್ಳಿ, ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಮೇಟಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಸಾಯಿಬಣ್ಣ ಕೆಂಗುರಿ, ಉದ್ದಿಮೆದಾರ ಮಹರಾಜ್ ದಿಗ್ಗಿ, ಹಿರಿಯರ ಮತ್ತು ಅಂಗವಿಕಲ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ, ರಾಯಚೂರು ಕುರಬ ಸಂಘದ ಜಿಲ್ಲಾಧ್ಯಕ್ಷ ಕೆ. ಬಸವಂತಪ್ಪ, ಹಿರಿಯ ಮುಖಂಡ ಭೀಮಶೆಪ್ಪ ಜೇಗರ, ಚಂದ್ರಶೇಖರ ವಾರದ, ಮರೆಪ್ಪ ಬಿಳ್ಹಾರ, ಸಿದ್ದಣ್ಣಗೌಡ ಕಾಡಂನೋರ, ಕುರುಬ ಸಂಘದ ಸೈದಾಪುರ ವಲಯಾ ಅಧ್ಯಕ್ಷ ರವಿಕುಮಾರ ಕಡೆಚೂರು, ಗುರುಮಠಕಲ್ ತಾಲ್ಲೂಕು ಕಾರ್ಯದರ್ಶಿ ಸಿದ್ದು ಪೂಜಾರಿ ಬದ್ದೇಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದ ಸಮಾಜದ ಹಿರಿಯರು, ಯುವಜನರು, ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.