ADVERTISEMENT

ಹಿಂಜರಿದಿದ್ದರೆ ಐಎಎಸ್‌ ಅಧಿಕಾರಿಯಾಗುತ್ತಿರಲಿಲ್ಲ: ಕೀರ್ತನಾ ಎಚ್‌.ಎಸ್.

ಐಎಎಸ್ ಪ್ರೊಬೆಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್. ಹೇಳಿಕೆ

ಚಂದ್ರಕಾಂತ ಮಸಾನಿ
Published 7 ಮಾರ್ಚ್ 2022, 20:30 IST
Last Updated 7 ಮಾರ್ಚ್ 2022, 20:30 IST
ಕೀರ್ತನಾ ಎಚ್‌.ಎಸ್.
ಕೀರ್ತನಾ ಎಚ್‌.ಎಸ್.   

ಬೀದರ್‌: 2011ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 10ನೇ ರ್‍ಯಾಂಕ್‌ ಪಡೆದಿದ್ದರೂ ಕೆಲ ಕಾರಣಗಳಿಂದಾಗಿ ಆಯ್ಕೆ ಪ್ರಕ್ರಿಯೆ ಕೋರ್ಟ್‌ ಮೆಟ್ಟಿಲೇರಿ ಆ ವರ್ಷದ ತಂಡವನ್ನೇ ಅಮಾನ್ಯಗೊಳಿಸಲಾಯಿತು. ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಪಾಸಾಗಲಿಲ್ಲ. ನೊಂದು ಅಥವಾ ಬೇಸರಪಟ್ಟು ಹಿಂಜರಿದಿದ್ದರೆ ಇಂದು ನಾನು ಐಎಎಸ್‌ ಅಧಿಕಾರಿ ಆಗುತ್ತಿರಲಿಲ್ಲ. ಛಲ ಬಿಡದೆ ಗುರಿಯ ಬೆನ್ನಟ್ಟಿದೆ. ಕೊನೆಗೂ ಯಶ ಬೆನ್ನುಚಪ್ಪರಿಸಿತು.

ಹೀಗೆಂದು ಮಹಿಳಾ ದಿನಾಚರಣೆ ಅಂಗವಾಗಿ ತಮ್ಮನ್ನು ಭೇಟಿ ಮಾಡಿದ ‘ಪ್ರಜಾವಾಣಿ’ಗೆ ಐಎಎಸ್ ಪ್ರೊಬೆಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್. ಹೇಳಿದರು.

‘ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನಾನು ಐಎಎಸ್ ಅಧಿಕಾರಿಯಾಗಬೇಕು ಎನ್ನುವುದು ತಂದೆಯ ಆಸೆಯಾಗಿತ್ತು. ಹೀಗಾಗಿ ಆವರು ನೀನು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದು ಆಗಾಗ ಹೇಳುತ್ತಿದ್ದರು. ಬೆಂಗಳೂರಿನ ಎಸ್‌ಜೆಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದಿ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಡೆವೆಲೆಪರ್‌ ಆಗಿ ಕೆಲಸಕ್ಕೆ ಸೇರಿಸಿಕೊಂಡೆ. ಇದರ ಜತೆ ಜತೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದೆ ಎಂದು ಮಾತು ಆರಂಭಿಸಿದರು.

ADVERTISEMENT

2011ರಲ್ಲಿ ಕೆಎಎಸ್‌ ಪರೀಕ್ಷೆಯಲ್ಲಿ ಪಾಸಾದರೂ ಆ ವರ್ಷದ ತಂಡವನ್ನೇ ತಿರಸ್ಕೃತಗೊಳಿಸಲಾಯಿತು. 2015ರಲ್ಲಿ ಮತ್ತೆ ಕೆಎಎಸ್‌ ಪರೀಕ್ಷೆ ಬರೆದೆ. 2018ರಲ್ಲಿ ಡೆವೆಲೆಪರ್‌ ಕೆಲಸ ಬಿಟ್ಟು ಬೆಂಗಳೂರಿನ ರಾಜಕುಮಾರ ಅಕಾಡೆಮಿಯಲ್ಲಿ ಅತಿಥಿ ಉಪನ್ಯಾಸಕಳಾಗಿ ಕೆಲಸಕ್ಕೆ ಸೇರಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದೆ. ಇದೇ ಅವಧಿಯಲ್ಲಿ ನಾನೂ ಚೆನ್ನಾಗಿ ಓದಿದೆ. ನಂತರ ಕೆಎಎಸ್‌ ಪರೀಕ್ಷೆ ಫಲಿತಾಂಶ ಪ್ರಕಟವಾಯಿತು. 202ರ ಫೆಬ್ರುವರಿಯಲ್ಲಿ ತಹಶೀಲ್ದಾರ್‌ ಹುದ್ದೆಗೆ ನೇಮಕವಾಗಿ 15 ದಿನ ಕೆಲಸ ಮಾಡಿದೆ ಎಂದು ಹೇಳಿದರು.


ತಹಶೀಲ್ದಾರಳಾಗಿ ಕೆಲಸಕ್ಕೆ ಸೇರಿದ 15 ದಿನಗಳಲ್ಲಿ ಯಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಿತು. ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಆದರೆ, ಪ್ರಿಲಿಮನರಿ ಪಾಸಾಗಲು ಸಾಧ್ಯವಾಗಿರಲಿಲ್ಲ. ಅತ್ಯಲ್ಪ ಅಂಕಗಳಿಂದ ಹಿನ್ನಡೆಯಾಗುತ್ತಿತ್ತು. ಛಲ ಬಿಡದೆ ಪರಿಶ್ರಮಪಟ್ಟು ಪ್ರಯತ್ನಿಸಿದೆ. ಕೊನೆಗೂ ಯಶ ಸಿಕ್ಕಿತು. ಇದೀಗ ಐಎಎಸ್ ಪ್ರೊಬೇಷನರಿ ಅಧಿಕಾರಿಯಾಗಿ ಬೀದರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಪ್ರತಿ ವರ್ಷ ಯುಪಿಎಸ್‌ಸಿ ಪರೀಕ್ಷೆಗೆ 12 ಲಕ್ಷ ಮಂದಿ ಅರ್ಜಿ ಹಾಕಿದರೂ 5 ಲಕ್ಷ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗುತ್ತಾರೆ. ಕೊನೆಗೆ ಸಂದರ್ಶನಕ್ಕೆ ಹಾಜರಾಗುವವರ ಸಂಖ್ಯೆ ಒಂದು ಸಾವಿರಕ್ಕೆ ಇಳಿಯುತ್ತದೆ. ನನ್ನ ಪರಿಚಯದ ವಿಜ್ಞಾನಿಯೊಬ್ಬರು ಪರಿಶ್ರಮ ಪಟ್ಟರೂ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಸಾಧ್ಯವಾಗಲಿಲ್ಲ ಎಂದರು.


ನಮ್ಮ ಸಮಸ್ಯೆಗಳೇ ದೊಡ್ಡದಾಗಬಾರದು. ಬೇರೆಯವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಮ್ಮದಾಗಬೇಕು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇವೆಲ್ಲ ನಮ್ಮನ್ನು ಯಶದ ಹಾದಿಯತ್ತ ಒಯ್ಯುತ್ತವೆ ಎಂದು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಅಖಿಲ ಭಾರತ ಮಟ್ಟದಲ್ಲಿ ಮಹಿಳೆ ಪ್ರಥಮ ರ್‍ಯಾಂಕ್‌ ಪಡೆದ ಉದಾಹರಣೆಗಳು ನಮ್ಮ ಮುಂದೆ ಇವೆ. ಕೆಲವರು ಸೌಲಭ್ಯಗಳ ಕೊರತೆ ಮಧ್ಯೆಯೂ ಸಾಧನೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಕಣ್ಣಿಲ್ಲದ ಮಹಿಳೆ ಪರೀಕ್ಷೆ ಪಾಸಾಗಿದ್ದಾರೆ. ಈ ಎಲ್ಲ ಅಂಶಗಳು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿವೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗ ಬಯಸುವ ಮಹಿಳೆಯರಿಗೆ ಕರ್ನಾಟಕದಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿದೆ. ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಇದೆ. ಯುಪಿಎಸ್‌ಸಿ ಪಾಸಾದರೆ ಮಹಿಳೆಯ ಬದುಕಿನ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು.

ತಂದೆ–ತಾಯಿ ಸಾಧನೆಗೆ ಪ್ರೇರಣೆ ನೀಡಿದ್ದಾರೆ. ನನ್ನ ತಂದೆ ಮೈಸೂರು ಲ್ಯಾಂಪ್‌ ಕಂಪನಿಯಲ್ಲಿದ್ದರು. 2013ರಲ್ಲಿ ಕೊನೆಯುಸಿರೆಳೆದರು. ತಾಯಿ ಹಾಗೂ ಸಹೋದರ ಬೆಂಗಳೂರಿನಲ್ಲಿ ಇದ್ದಾರೆ. ಯುಪಿಎಸ್‌ಸಿ ಪಾಸಾದ ನಂತರ ಸಮಾಜದಲ್ಲಿ ಘನತೆ ಗೌರವ ದೊರಕಿದೆ. ಸಾಮಾಜಿಕ ಜವಾಬ್ದಾರಿಯೂ ಹೆಚ್ಚಿದೆ ಎಂದು ಹೇಳಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.