ADVERTISEMENT

ಪರಿಶಿಷ್ಟ ಪಟ್ಟಿಯಿಂದ ಕೈಬಿಟ್ಟರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 11:23 IST
Last Updated 9 ಜೂನ್ 2020, 11:23 IST
ಔರಾದ್ ಪಟ್ಟಣದಲ್ಲಿ ಮಂಗಳವಾರ ಲಂಬಾಣಿ, ವಡೆಯರ್ ಸಮಾಜದ ಪ್ರಮುಖರು ಸಭೆ ನಡೆಸಿ ತಮ್ಮ ಸಮುದಾಯಗಳನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿದರು
ಔರಾದ್ ಪಟ್ಟಣದಲ್ಲಿ ಮಂಗಳವಾರ ಲಂಬಾಣಿ, ವಡೆಯರ್ ಸಮಾಜದ ಪ್ರಮುಖರು ಸಭೆ ನಡೆಸಿ ತಮ್ಮ ಸಮುದಾಯಗಳನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿದರು   

ಔರಾದ್: ‘ಲಂಬಾಣಿ, ಭೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಟ್ಟರೆ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಶಿನಾಥರಾವ ಜಾಧವ, ಪಟ್ಟಣ ಪಂಚಾಯಿತಿ ಸದಸ್ಯ ಸಂಜೀವ ವಡೆಯರ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಚಿನ್ ರಾಠೋಡ, ನಾಗನಾಥ ಸಾಡಗಂಗಲೆ ಹಾಗೂ ಬಾಳು ರಾಠೋಡ ಸೇರಿದಂತೆ ಹಲವರು ಮಂಗಳವಾರ ಸಭೆ ನಡೆಸಿದರು. ಈ ವಿಷಯದ ಕುರಿತು ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿದರು.

‘ಲಂಬಾಣಿ, ವಡೆಯರ್ ಸೇರಿದಂತೆ ನಾಲ್ಕು ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಈ ಕುರಿತು ಕೋರ್ಟ್‌ ಸರ್ಕಾರದ ಅಭಿಪ್ರಾಯ ಕೇಳಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಾಲ್ಕು ಜಾತಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ವಾಸ್ತವ ಮಾಹಿತಿ ನೀಡಬೇಕು’ ಎಂದು ವಡೆಯರ್ ಸಮಾಜದ ಧುರೀಣ ನಾಗನಾಥ ಸಾಡಂಗಲೆ ಹೇಳಿದರು.

ADVERTISEMENT

‘ಲಂಬಾಣಿ ಸೇರಿದಂತೆ ಈ ನಾಲ್ಕು ಜಾತಿ ಜನ ಈಗಲೂ ಕನಿಷ್ಠ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಬೆರಳಣಿಕೆ ಜನರ ಸ್ಥಿತಿ ನೋಡಿ ಇಡೀ ಸಮಯದಾಯ ಸೌಲಭ್ಯದಿಂದ ವಂಚಿಸುವುದು ಕಾನೂನು ಬಾಹಿರವಾಗುತ್ತದೆ’ ಎಂದು ಕಾಶಿನಾಥರಾವ ಜಾಧವ ತಿಳಿಸಿದರು.

ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ನಾಳೆಯಿಂದ ರಾಜ್ಯಾದ್ಯಂತ ಪತ್ರ ಚಳವಳಿ ನಡೆಯಲಿದೆ. ತಾಲ್ಲೂಕಿನಿಂದ 25 ಸಾವಿರ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.