ADVERTISEMENT

ಗಡಿ ರಸ್ತೆಗಳ ಸುಧಾರಣೆ ಶೀಘ್ರ: ಸಲಗರ

ಭಕನಾಳ-– ಉಜಳಂಬ, ಉಜಳಂಬ–ಧಾಮೂರಿ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:16 IST
Last Updated 24 ಜೂನ್ 2021, 5:16 IST
ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಬುಧವಾರ ನಡೆದ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಅವರಿಗೆ ಮಹಿಳೆಯರು ಮನವಿಪತ್ರ ಸಲ್ಲಿಸಿದರು
ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಬುಧವಾರ ನಡೆದ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಅವರಿಗೆ ಮಹಿಳೆಯರು ಮನವಿಪತ್ರ ಸಲ್ಲಿಸಿದರು   

ಬಸವಕಲ್ಯಾಣ: ‘ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಗಡಿ ಭಾಗದ ರಸ್ತೆಗಳ ಸುಧಾರಣೆ ಶೀಘ್ರ ಕೈಗೊಳ್ಳಲಾಗುತ್ತದೆ. ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಪ್ರಯತ್ನಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ.

ತಾಲ್ಲೂಕಿನ ಉಜಳಂಬದಲ್ಲಿ ಬುಧವಾರ ಭಕನಾಳ- ಉಜಳಂಬ ಹಾಗೂ ಉಜಳಂಬ- ಧಾಮೂರಿ ರಸ್ತೆಗಳ ಡಾಂಬರೀಕರಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ಎರಡು ರಸ್ತೆಗಳು ತೀರ ಹದಗೆಟ್ಟಿದ್ದರಿಂದ ಜನರು ಅನೇಕ ದಿನಗಳಿಂದ ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿತರಿಗೆ ಸೂಚಿಸಲಾಗಿದೆ. ಗದ್ಲೇಗಾಂವ(ಕೆ) ದಿಂದ ಮಹಾರಾಷ್ಟ್ರದ ಧಾನೂರ ವರೆಗಿನ 1.15 ಕಿ.ಮೀ ಮತ್ತು ಉಜಳಂಬದಿಂದ ಮಳಗಿ ವರೆಗಿನ 2 ಕಿ.ಮೀ ರಸ್ತೆ ಡಾಂಬರೀಕರಣ ಕೂಡ ಶೀಘ್ರ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಗ್ರಾಮದಲ್ಲಿ ಶಿವಾಜಿ ಮಹಾರಾಜ ಪ್ರತಿಮೆ ಸ್ಥಾಪನೆಗೆ ಸಹಕಾರ ನೀಡಲಾಗುವುದು. ಆಶ್ರಯ ಮನೆ, ಪಡಿತರ ಚೀಟಿ, ವೃದ್ಧಾಪ್ಯವೇತನಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಗ್ರಾಮದ ಅನೇಕರು ವಿವಿಧ ಸಮಸ್ಯೆ ಬಗೆಹರಿಸಲು ಶಾಸಕರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಗ್ರಾಮದ ಸುತ್ತಲಿನ 15 ಕಿ.ಮೀ ವ್ಯಾಪ್ತಿಯ ರಸ್ತೆಗಳ ಸುಧಾರಣೆ ಕೈಗೊಳ್ಳಬೇಕು. ಮಹಾರಾಷ್ಟ್ರದ ಭಕ್ತರು ಹಾರಕೂಡ ಮಠಕ್ಕೆ ಮತ್ತು ಕೊಹಿನೂರ ಹೋಬಳಿ ಗ್ರಾಮಗಳಿಗೆ ಇಲ್ಲಿನ ರಸ್ತೆಗಳಿಂದ ಸಂಚರಿಸುತ್ತಾರೆ. ರಸ್ತೆ ಸರಿ ಇಲ್ಲದ್ದರಿಂದ ಬಸ್ ಹಾಗೂ ಇತರೆ ವಾಹನಗಳ ಸಂಚಾರ ಬಂದ್ ಆಗಿರುವ ಕಾರಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದೂ ಆಗ್ರಹಿಸಿದರು.

ಮುಖಂಡರಾದ ರಾಜಕುಮಾರ ಶಿರಗಾಪುರ, ರತಿಕಾಂತ ಕೊಹಿನೂರ, ಬಸವರಾಜಸ್ವಾಮಿ ಬಟಗೇರಾ, ಚಂದ್ರಕಾಂತ ಪಾಟೀಲ, ಬಾಳಾ ಅಷ್ಟೆ, ಸುನಿಲ ಕಾರಬಾರಿ, ಸತೀಶ ಪಾಟೀಲ, ಗೋವಿಂದ ಭೂಸಾಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ದಶರಥ, ಉಪಾಧ್ಯಕ್ಷೆ ಸಂಜೀವ ಬಿರಾದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಖನಕೂರೆ, ಗುತ್ತಿಗೆದಾರ ಸುನಿಲ ಮಾನೆ, ಎಇಇ ವೈಜಪ್ಪ ಮಜಗೆ ಉಪಸ್ಥಿತರಿದ್ದರು.

ನಂತರ ಶಾಸಕರು ಶಿವಾಜಿ ಪ್ರತಿಮೆ ಸ್ಥಾಪನಾ ಸ್ಥಳಕ್ಕೆ ಭೇಟಿ ನೀಡಿದರು. ಹದಗೆಟ್ಟಿರುವ ಮಳಗಿ ರಸ್ತೆಯಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.