ADVERTISEMENT

ಬೀದರ್‌: ತರಕಾರಿಗೆ ಇಂಧನ ಬೆಲೆ ಹೆಚ್ಚಳದ ಕಾವು

ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌, ಬೀನ್ಸ್‌ ಜಿಗಿತ

ಚಂದ್ರಕಾಂತ ಮಸಾನಿ
Published 16 ಅಕ್ಟೋಬರ್ 2021, 19:30 IST
Last Updated 16 ಅಕ್ಟೋಬರ್ 2021, 19:30 IST
ಬೀದರ್‌ನ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಪೆಟ್ರೋಲ್ ಹಾಗೂ ಡೀಸೆಲ್ ದರ ಶತಕ ದಾಟಿದ ನಂತರ ಬೆಲೆ ಹೆಚ್ಚಳದ ಕಾವು ಇಲ್ಲಿಯ ತರಕಾರಿ ಮಾರುಕಟ್ಟೆಗೂ ತಟ್ಟಿದೆ. ಒಂದು ವಾರದಿಂದ ತೈಲ ಬೆಲೆಯಲ್ಲಿ ಸತತ ಏರಿಕೆಯಾದ ಕಾರಣ ತರಕಾರಿ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 500ರಿಂದ ₹ 1 ಸಾವಿರ ಹೆಚ್ಚಳವಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ತರಕಾರಿ ಬೆಳೆದ ರೈತರಿಗೆ ಲಾಭ ಕೈಸೇರಿಲ್ಲ. ಸರಕು ಸಾಗಣೆ ವಾಹನಗಳ ಮಾಲೀಕರು ವಾಹನಗಳ ಬಾಡಿಗೆ ಪರಿಷ್ಕರಿಸಿರುವ ಕಾರಣ ಸಹಜವಾಗಿಯೇ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳ ಕಂಡು ಬಂದಿದೆ.

ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಹೂಕೋಸು, ಸಬ್ಬಸಗಿ, ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500, ಆಲೂಗಡ್ಡೆ, ಬೀಟ್‌ರೂಟ್‌, ಬೀನ್ಸ್‌, ಎಲೆಕೋಸು, ಮೆಂತೆ ಸೊಪ್ಪು ಹಾಗೂ ಕೊತಂಬರಿ ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ.

ADVERTISEMENT

ಟೊಮೆಟೊ ₹ 600, ಗಜ್ಜರಿ ಹಾಗೂ ಪಾಲಕ್‌ ಬೆಲೆ ಕ್ವಿಂಟಲ್‌ಗೆ ₹ 1 ಸಾವಿರ ಕಡಿಮೆಯಾಗಿದೆ. ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ, ಕರಿಬೇವು ಹಾಗೂ ಬೆಳ್ಳುಳ್ಳಿ ಬೆಲೆ ಸ್ಥಿರವಾಗಿದೆ.

ನಗರದ ಸಗಟು ಮಾರುಕಟ್ಟೆಗೆ ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌ ಸೋಲಾಪುರ ಹಾಗೂ ನಾಸಿಕ್‌ದಿಂದ ಆವಕವಾದರೆ, ಹಿರೇಕಾಯಿ, ಬೀನ್ಸ್‌, ಹೂಕೋಸು, ಸಬ್ಬಸಗಿ, ಎಲೆಕೋಸು, ಮೆಂತೆ ಸೊಪ್ಪು ಹಾಗೂ ಕೊತಂಬರಿ ತೆಲಂಗಾಣದ ಜಿಲ್ಲೆಗಳಿಂದ ಬಂದಿದೆ. ಹೊರ ರಾಜ್ಯಗಳಿಂದ ಬಂದ ತರಕಾರಿ ಬೆಲೆಗಳಲ್ಲೇ ಏರಿಕೆಯಾಗಿದೆ.

ಬೀದರ್‌ ಗ್ರಾಮೀಣ, ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ, ಕರಿಬೇವು ಟೊಮೆಟೊ, ಗಜ್ಜರಿ ಹಾಗೂ ಪಾಲಕ್‌ ಮಾರುಕಟ್ಟೆಗೆ ಬಂದಿದೆ.

‘ಒಂದು ತಿಂಗಳಿಂದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಮುಂದುವರಿದಿದೆ. 15 ದಿನಗಳ ಹಿಂದೆ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿ ಕೆಲ ತರಕಾರಿ ಬೆಲೆ ಏರಿತ್ತು. ಕೊಳೆಯುವ ಭಯದಿಂದ ರೈತರು ಕೆಲ ತರಕಾರಿಯನ್ನು ಮಾರುಕಟ್ಟೆಗೆ ತಂದ ಕಾರಣ ದಿಢೀರ್‌ ಬೆಲೆ ಕುಸಿದಿತ್ತು. ಆದರೆ, ಈ ಬಾರಿ ತೈಲ ಬೆಲೆ ಹೆಚ್ಚಳದಿಂದ ತರಕಾರಿ ಬೆಳೆ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.
...................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 40-45,40-50
ಮೆಣಸಿನಕಾಯಿ 30-40,40-50
ಆಲೂಗಡ್ಡೆ 40-45,40-50
ಎಲೆಕೋಸು 25-30,30-40
ಬೆಳ್ಳುಳ್ಳಿ 80-90,80-90
ಗಜ್ಜರಿ 50-60,40-50
ಬೀನ್ಸ್‌ 120-130,130-140
ಬದನೆಕಾಯಿ 40-50,40-50
ಮೆಂತೆ ಸೊಪ್ಪು 30-40,40-50
ಹೂಕೋಸು 40-45,40-50
ಸಬ್ಬಸಗಿ 30-35,35-40
ಬೀಟ್‌ರೂಟ್‌ 60-65,50-60
ತೊಂಡೆಕಾಯಿ 30-40,30-40
ಕರಿಬೇವು 20-30,20-30
ಕೊತಂಬರಿ 30-35,30-40
ಟೊಮೆಟೊ 80-100,60-70
ಪಾಲಕ್‌ 40-50,30-40
ಬೆಂಡೆಕಾಯಿ 40-45,40-45
ಹಿರೇಕಾಯಿ 40-45,40-50
ನುಗ್ಗೆಕಾಯಿ 80-90,80-90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.