ADVERTISEMENT

ಮೂಲಸೌಕರ್ಯ ವಂಚಿತ ಬೋರಾಳ

ಶುದ್ಧ ನೀರಿನ ಘಟಕವಿದ್ದರೂ ಪ್ರಯೋಜನವಿಲ್ಲ; ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲ

ಮನ್ನಥಪ್ಪ ಸ್ವಾಮಿ
Published 2 ಮಾರ್ಚ್ 2021, 4:42 IST
Last Updated 2 ಮಾರ್ಚ್ 2021, 4:42 IST
ಔರಾದ್‌ನ ಬೋರಾಳ ಗ್ರಾಮದ ಶುದ್ಧ ನೀರಿನ ಘಟಕ ಬಳಕೆಯಾಗದೆ ಹಾಳಾಗಿದೆ
ಔರಾದ್‌ನ ಬೋರಾಳ ಗ್ರಾಮದ ಶುದ್ಧ ನೀರಿನ ಘಟಕ ಬಳಕೆಯಾಗದೆ ಹಾಳಾಗಿದೆ   

ಔರಾದ್: ತಾಲ್ಲೂಕಿನ ಬೋರಾಳ ಗ್ರಾಮಸ್ಥರು ಇಂದಿಗೂ ವಿವಿಧ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಎಕಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಜನರಿದ್ದು, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.

‘ನಮ್ಮ ಊರಲ್ಲಿ ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ನೀರಿನ ಘಟಕ ಕೂಡಿಸಿದ್ದಾರೆ. ಆದರೆ ಇಂದಿಗೂ ಅದು ಬಳಕೆಯಾಗದೆ ಹಾಳಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿಯವರಿಗೆ ಸಾಕಷ್ಟು ಸಲ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಉಮಾಕಾಂತ ಸೋನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮ್ಮ ಊರಲ್ಲಿ ಸಾಕಷ್ಟು ನೀರಿನ ಮೂಲ ಇದೆ. ಆದರೆ ನಿರ್ವಹಣೆ ಕೊರತೆಯಿಂದ ಜನ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಪೈಪ್‍ಲೈನ್ ಅಲ್ಲಲ್ಲಿ ಸೋರುತ್ತಿದೆ. ಇದರಿಂದ ಗಲೀಜು ನೀರು ಪೈಪ್‍ನಲ್ಲಿ ಸೇರಿ ಜನರಿಗೆ ಅನಾರೋಗ್ಯದ ಸಮಸ್ಯೆಯಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮದ ವಿವಿಧೆಡೆ ನೀರು ನಿಂತು ಗಬ್ಬು ನಾರುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ತಾಲ್ಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಬೋರಾಳ ಗ್ರಾಮದಲ್ಲಿ ಸೂಕ್ತ ರಸ್ತೆ ಸೌಲಭ್ಯ ಇಲ್ಲ. ಬೀದರ್-ಔರಾದ್ ಮುಖ್ಯ ರಸ್ತೆಯಿಂದ ಬೋರಾಳ ಊರಿಗೆ ಹೋಗುವ ಜೋಡು ರಸ್ತೆ ನಿರ್ಮಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಕ್ಷೇತ್ರದ ಶಾಸಕರು ಹಾಗೂ ಈಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೋರಾಳ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿರುವುದು ನಿಜ. ಆದರೆ ಸಂಬಂಧಿತ ಏಜೆನ್ಸಿಯವರು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಸಾಕಷ್ಟು ಕಡೆ ಇದೇ ರೀತಿಯ ಸಮಸ್ಯೆ ಆಗಿದೆ. ಇದರಿಂದ ವಿವಿಧ ಗ್ರಾಮಗಳಲ್ಲಿ ಘಟಕಗಳಿದ್ದರೂ ಜನರಿಗೆ ಉಪಯೋಗವಾಗುತ್ತಿಲ್ಲ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮಾಹಿತಿ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

‘ಬೋರಾಳದಲ್ಲಿ ರಸ್ತೆ, ಚರಂಡಿ ಸಮಸ್ಯೆ ಇರುವುದು ನಮ್ಮ ಗಮನಕ್ಕೂ ಬಂದಿದೆ. ಈಗ ಹೊಸದಾಗಿ ಆಡಳಿತ ಮಂಡಳಿ ರಚನೆಯಾಗಿದೆ. ಹೊಸ ಅಧ್ಯಕ್ಷರ ಗಮನಕ್ಕೆ ತಂದು ಈ ಊರಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.