ADVERTISEMENT

CJI ಮೇಲೆ ಶೂ ಎಸೆಯಲು ಯತ್ನ: ರಾಕೇಶ್‌ ಕಿಶೋರ್‌ ವಿರುದ್ಧ ಕ್ರಮಕ್ಕೆ ಆಗ್ರಹ

ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನಾ ಮೆರವಣಿಗೆ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:22 IST
Last Updated 16 ಅಕ್ಟೋಬರ್ 2025, 7:22 IST
ಹುಲಸೂರ ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಹುಲಸೂರ ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ಹುಲಸೂರ: ಸಿಜೆಐ ಬಿ.ಆ‌ರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಪೊಲೀಸ್ ಠಾಣೆ ಬಳಿಯ ಮುಖ್ಯ ರಸ್ತೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಗ್ರಾಮ ಕ್ರಾಂತಿ ಸೇನೆ, ಭಾರತೀಯ ಬೌದ್ಧ ಮಹಾಸಭಾ, ವಾಯ್ಸ್ ಆಫ್ ಅಂಬೇಡ್ಕರ್, ದಸಂಸ, ಭೀಮ್ ಆರ್ಮಿ, ಅಂಬೇಡ್ಕರ್ ಸೇವಾ ಸಮಿತಿ, ಬಿಎಸ್‌ಪಿ, ಸಂಭಾಜಿ ಬ್ರಿಗೇಡ್, ಎ‌ಎಸ್‌ಎಸ್‌ಕೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ADVERTISEMENT

ಗ್ರಾಮ ಕ್ರಾಂತಿ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಸಂದೀಪ್ ಮುಕಿಂದೆ ಮಾತನಾಡಿ,‘ವಕೀಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ಕೋರ್ಟ್ ಹಾಲ್‌ನಲ್ಲಿಯೇ ಶೂ ಎಸೆಯಲು ಯತ್ನಿಸುತ್ತಾನೆ ಎಂದರೆ ಅದು ಅವನ ಮನುವಾದದ ಮನಸ್ಥಿತಿ, ಸಂವಿಧಾನ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಶಂಕರ ಫುಲೆ ಮಾತನಾಡಿ,‘ವಕೀಲನ ಕೃತ್ಯ ಖಂಡನೀಯ. ಸನಾತನ ಧರ್ಮದ ಮೇಲಿನ ಅವಮಾನ ಸಹಿಸುವುದಿಲ್ಲ ಎಂದು ಕಿರುಚಾಡಿದ ವಕೀಲನ ಕೃತ್ಯ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಡೆದ ನೇರ ದಾಳಿಯಾಗಿದೆ’ ಎಂದರು.

ಅಂಬೇಡ್ಕರ್‌ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಲೋಕೇಶ್ ಕಾಂಬಳೆ ಮಾತನಾಡಿ,‘ಈ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆಯ ಯತ್ನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಮಾಡಿದ ಘೋರ ಅವಮಾನವಾಗಿದ್ದು, ಮನುವಾದಿ ಪೀಡಿತ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಾಯ್ಸ್ ಆಫ್ ಅಂಬೇಡ್ಕರ್ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ ಮೊರೆ ಮಾತನಾಡಿದರು.

‘ಸಿಜೆಐ ಅವರಿಗೆ ಅವಮಾನ ಮಾಡಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾ‌ರ್ ಸುನೀಲ ಸಜ್ಜನಶೆಟ್ಟಿ ಅವರಿಗೆ ಸಲ್ಲಿಸಿದರು. 

ಪ್ರಮುಖರಾದ ದೇವಾನಂದ ತೋಳೆ, ನಾಗನಾಥ ಬನಸೂಡೆ, ವಿನೋದ ಶಿಂಧೆ,‌ ವಿದ್ಯಾಸಾಗರ ಬನಸೂಡೆ, ಸುರೇಶ ಮೊರೆ, ಲೋಕೇಶ ಕಾಂಬಳೆ, ಮುಕೇಶ್ ಪಾಂಡೆ, ಸಾಗರ ಮುಡಬಿ, ಜ್ಞಾನೋಬಾ ನಿಟ್ಟೂರೆ, ಅಜೀತ್ ಸೂರ್ಯವಂಶಿ, ಬಬನ ಗೋರೆ, ಲಖನ್ ಪಂಡಿತ, ಶಾಲುಬಾಯಿ ಬನಸೂಡೆ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.