ADVERTISEMENT

ಪರಂಪರೆ ನಗರಕ್ಕೆ ಬಂದ ನಾಡಿನ ವಿದ್ಯಾರ್ಥಿಗಳು

ಅಂತರ್‌ ಮಹಾವಿದ್ಯಾಲಯಗಳ ಯುವಜನೋತ್ಸವ ಇಂದಿನಿಂದ

ಚಂದ್ರಕಾಂತ ಮಸಾನಿ
Published 11 ಅಕ್ಟೋಬರ್ 2019, 15:43 IST
Last Updated 11 ಅಕ್ಟೋಬರ್ 2019, 15:43 IST
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್‌ ತೋಟಗಾರಿಕೆ ಮಹಾವಿದ್ಯಾಲಯಗಳ ಯುವಜನೋತ್ಸವದ ಮುನ್ನಾ ದಿನವಾದ ಶುಕ್ರವಾರ ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ವಿದ್ಯಾರ್ಥಿಗಳು ಡೊಳ್ಳು ಕುಣಿತದ ಅಭ್ಯಾಸ ಮಾಡಿದರು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್‌ ತೋಟಗಾರಿಕೆ ಮಹಾವಿದ್ಯಾಲಯಗಳ ಯುವಜನೋತ್ಸವದ ಮುನ್ನಾ ದಿನವಾದ ಶುಕ್ರವಾರ ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ವಿದ್ಯಾರ್ಥಿಗಳು ಡೊಳ್ಳು ಕುಣಿತದ ಅಭ್ಯಾಸ ಮಾಡಿದರು   

ಬೀದರ್‌: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಅಂತರ್‌ ತೋಟಗಾರಿಕೆ ಮಹಾವಿದ್ಯಾಲಯಗಳ ಯುಜನೋತ್ಸವಕ್ಕೆ ಪರಂಪರೆ ನಗರ ಅಣಿಯಾಗಿದೆ. ಯುವಜನೋತ್ಸವದಲ್ಲಿ ಪ್ರತಿಭೆ ಮೆರೆಯಲು ರಾಜ್ಯದ ವಿವಿಧೆಡೆಯಿಂದ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಸಂಜೆಯೇ ನಗರಕ್ಕೆ ಬಂದಿಳಿದಿದ್ದಾರೆ.

ಹೊರ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯ ಹಾಸ್ಟೆಲ್‌ ಹಾಗೂ ಗುರುನಾನಕ ಯಾತ್ರಿ ನಿವಾಸದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ 9 ತಂಡಗಳು 18 ಬಗೆಯ ಕಲಾ ಪ್ರದರ್ಶನ ನೀಡಲಿವೆ.

ಪ್ರತಿಯೊಂದು ಮಹಾವಿದ್ಯಾಲಯದಿಂದ 22 ವಿದ್ಯಾರ್ಥಿಗಳು ಸೇರಿ ಒಟ್ಟು 9 ತೋಟಗಾರಿಕೆ ಮಹಾವಿದ್ಯಾಲಯಗಳ 198 ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.

ADVERTISEMENT

ಶನಿವಾರದಿಂದ ಮೂರು ದಿನ ಯುವಜನೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಎರಡು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾ ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೈದರಾಬಾದ್ ರಸ್ತೆಯಲ್ಲಿರುವ ತೋಟಗಾರಿಕೆ ಕಾಲೇಜಿನ ಸಭಾಂಗಣದಲ್ಲಿ ರಂಗೋಲಿ, ಚಿತ್ರಕಲೆ ಮೊದಲಾದ ಸ್ಪರ್ಧೆಗಳು ನಡೆಯಲಿವೆ.

ಮೂರು ದಿನಗಳ ಯುವಜನೋತ್ಸವದಲ್ಲಿ ಸಂಗೀತ, ಸಮೂಹ ಗಾನ, ಏಕಪಾತ್ರಾಭಿನಯ, ಮೂಕಾಭಿನಯ, ಜಾನಪದ ಸಮೂಹ ನೃತ್ಯ, ರಸಪ್ರಶ್ನೆ, ರಂಗೋಲಿ, ಕೋಲಾಜ್, ಭಿತ್ತಿಚಿತ್ರ, ಮಣ್ಣಿನ ಆಕೃತಿ ರಚನೆ, ವ್ಯಂಗ್ಯಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಡೊಳ್ಳು ಕುಣಿತ, ಕಂಸಾಳೆ ಕುಣಿತ, ಯಕ್ಷಗಾನ ಮೊದಲಾದ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.

ಶನಿವಾರ (ಅ.12) ಬೆಳಿಗ್ಗೆ 8 ಗಂಟೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾ ರಂಗ ಮಂದಿರದ ವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ರಂಗ ಮಂದಿರದಲ್ಲಿ ಸಾಹಿತಿ ರಂಜಾನ್‌ ದರ್ಗಾ ಯುವಜನೋತ್ಸವಕ್ಕೆ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಪಾಲ್ಗೊಳ್ಳಲಿದ್ದಾರೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ರಂಗ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಲಘು ಸಂಗೀತ, ಮಧ್ಯಾಹ್ನ 2 ಗಂಟೆಗೆ ದೇಶಭಕ್ತಿ ಗೀತೆ, ಸಮೂಹ ಗಾಯನ, ಸಂಜೆ 6 ಗಂಟೆಗೆ ಪ್ರಹಸನ, ತೋಟಗಾರಿಕೆ ಕಾಲೇಜಿನಲ್ಲಿ ಮಧ್ಯಾಹ್ನ 2 ಗಂಟೆಗೆ ರಸಪ್ರಶ್ನೆ, ರಂಗೋಲಿ, ಸಂಜೆ 4.30ಕ್ಕೆ ಕೋಲಾಜ್ ಹಾಗೂ 7 ಗಂಟೆಗೆ ಭಿತ್ತಿಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ.

ಅ.13 ರಂದು ಭಾಷಣ, ಆಶುಭಾಷಣ, ಚರ್ಚಾ ಸ್ಪರ್ಧೆ, ಏಕಾಂಕ ನಾಟಕ, ಮಣ್ಣಿನ ಆಕೃತಿ ರಚನೆ, ವ್ಯಂಗ್ಯಚಿತ್ರ ಬಿಡಿಸುವಿಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಅ.14 ರಂದು ಬೆಳಿಗ್ಗೆ ಏಕಪಾತ್ರಾಭಿನಯ, ಮೂಕಾಭಿನಯ, ರಸಪ್ರಶ್ನೆ, ಮಧ್ಯಾಹ್ನ ಜಾನಪದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ನೃತ್ಯ ಅಭ್ಯಾಸ ಮಾಡಿದರು. ತೋಟಗಾರಿಕೆ ಮಹಾವಿದ್ಯಾಲಯದ ಡಾ.ಶ್ರೀನಿವಾಸ ಎನ್. ಹಾಗೂ ಪ್ರೊ.ಪ್ರವೀಣ ನಾಯ್ಕೋಡೆ ಅವರು ಯುವಜನೋತ್ಸವದ ಸಿದ್ಧತೆ ಪರಿಶೀಲಿಸಿದರು. ಹೊರ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.