
ಬೀದರ್: ‘ಬೀದರ್ ಚೆಸ್ ಅಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಸಹಯೋಗದಲ್ಲಿ ಇಲ್ಲಿನ ಶಿವನಗರ ರಾಮ ಸಮರ್ಥ ಫಂಕ್ಷನ್ ಹಾಲ್‌ನಲ್ಲಿ ಜ. 18ರಂದು ವಿದ್ಯಾರ್ಥಿಗಳು ಹಾಗೂ 80 ವರ್ಷ ವಯಸ್ಸಿನೊಳಗಿನ ಹಿರಿಯರಿಗೆ ಅಂತರರಾಜ್ಯ ಮುಕ್ತ ಚೆಸ್ ಟೂರ್ನಿ ಹಮ್ಮಿಕೊಳ್ಳಲಾಗಿದೆ’ ಎಂದು ಅಸೋಸಿಯೇಶನ್ ಅಧ್ಯಕ್ಷ ನಿತಿನ್ ಕರ್ಪೂರ್ ತಿಳಿಸಿದರು.
ಅಂದು ಬೆಳಿಗ್ಗೆ 8.30ರೊಳಗೆ ಸ್ಪರ್ಧಾಳುಗಳು ಟೂರ್ನಿ ನಡೆಯುವ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ಬೆಳಿಗ್ಗೆ 10ರಿಂದ ಪಂದ್ಯಗಳು ಆರಂಭಗೊಳ್ಳಲಿವೆ. ಸ್ಥಳೀಯ ವಿದ್ಯಾರ್ಥಿಗಳಿಗೆ ₹300 ಹಾಗೂ ಹೊರಗಿನವರಿಗೆ ₹500 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮುಕ್ತ ಟೂರ್ನಿಯಲ್ಲಿ ಪ್ರಥಮ ಬಹುಮಾನ ₹4 ಸಾವಿರ, ದ್ವಿತೀಯ ಬಹುಮಾನ ₹3 ಸಾವಿರ, ತೃತೀಯ ಬಹುಮಾನ ₹2 ಸಾವಿರ ಇದೆ. 60 ವರ್ಷ ಮೇಲಿನ ಸ್ಪರ್ಧಿಗಳಿಗೆ ಮೊದಲ ಬಹುಮಾನ ₹3 ಸಾವಿರ, ದ್ವಿತೀಯ ಬಹುಮಾನ ₹2 ಸಾವಿರ ಹಾಗೂ ₹1 ಸಾವಿರ ತೃತೀಯ ಬಹುಮಾನ ಇಡಲಾಗಿದೆ. ವಿವಿಧ ಏಳು ಕೆಟೆಗರಿಗಳಲ್ಲಿ ಸ್ಪರ್ಧೆ ಜರುಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಅಧ್ಯಕ್ಷ ಡಾ. ನಾಗೇಶ್ ಪಾಟೀಲ್ ಮಾತನಾಡಿ, ಚೆಸ್ ಆಡುವುದರಿಂದ ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಾಗುತ್ತದೆ. ಏಕಾಗ್ರತೆ ಜಾಗೃತವಾಗುತ್ತದೆ. ಜೀವನ ಕೌಶಲ ಸುಧಾರಿಸುತ್ತದೆ. ಸ್ಪರ್ಧಾ ಮನೋಭಾವ ಹೆಚ್ಚಳವಾಗಿಸಲು ಇದು ಸಹಾಯ ಮಾಡುತ್ತದೆ. ಇದು ಮುಕ್ತ ಟೂರ್ನಿ ಇರುವ ಕಾರಣ ಗ್ರಾಮೀಣ ಪ್ರತಿಭೆಗಳು ಭಾಗವಹಿಸಬಹುದು ಎಂದರು.
ಡಾ.ಆರತಿ ರಘು, ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ ಸ್ವಾಮಿ, ರೋಟರಿಯನ್‌ಗಳಾದ ರಾಜಕುಮಾರ ಅಳ್ಳೆ, ವಿಕ್ರಮ ತಗಾರೆ, ರಾಹುಲ್ ಅಟ್ಟಲ್, ಡಾ.ಮಲ್ಲಿಕಾರ್ಜುನ್ ಚಟ್ನಳ್ಳಿ, ಸಚ್ಚಿದಾನಂದ ಚಿದ್ರೆ ಹಾಜರಿದ್ದರು.
ನೋಂದಣಿಗೆ ಜ. 16 ಕೊನೆ ದಿನ ಪಂದ್ಯಾವಳಿಯ ಅಧ್ಯಕ್ಷ ಡಾ.ಚಂದ್ರಕಾಂತ ಕುಲಕರ್ಣಿ ಮಾತನಾಡಿ ಈಗಾಗಲೇ 100 ಜನ ಸ್ಪರ್ಧಿಗಳ ನೋಂದಣಿಯಾಗಿದೆ. ಜ. 16ರಂದು ನೋಂದಣಿಗೆ ಕೊನೆ ದಿನವಾಗಿದೆ. ಕೇವಲ ಬೀದರ್ ಅಷ್ಟೆ ಅಲ್ಲ ಬೇರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಸ್ಪರ್ಧಾಳುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಮೆದುಳಿಗೆ ಸಹಾಯಕ ಡಾ.ರಘು ಕೃಷ್ಣಮೂರ್ತಿ ಮಾತನಾಡಿ ಚದುರಂಗದಾಟವು ನಮ್ಮ ಎಡ ಹಾಗೂ ಬಲ ಎರಡು ಮೆದುಳುಗಳ ಮೇಲೆ ಉತ್ತಮ ಪರಿಣಾಮ ಬಿರುತ್ತದೆ. ಮೊಬೈಲ್‌ಗಳಿಗೆ ಮಾರು ಹೋಗಿ ವಿಡಿಯೋ ಗೇಮ್‌ನಲ್ಲಿ ಕಾಲಹರಣ ಮಾಡುವುದಕ್ಕಿಂತ ಇಂತಹ ಪಂದ್ಯಾಟದಲ್ಲಿ ಭಾಗವಹಿಸುವುದು ಉತ್ತಮ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.