ADVERTISEMENT

ಬಸವಕಲ್ಯಾಣ | ‘ನಾಸ್ತಿಕರಿಗೆ ಆಸಕ್ತಿ ಇದ್ದರೂ ಜ್ಞಾನದ ಕೊರೆತೆಯಿದೆ’

ಇಷ್ಟಲಿಂಗ ಮಹಾಪೂಜೆಯಲ್ಲಿ ತಡೋಳಾ ರಾಜೇಶ್ವರ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:42 IST
Last Updated 23 ಸೆಪ್ಟೆಂಬರ್ 2025, 4:42 IST
ಬಸವಕಲ್ಯಾಣದಲ್ಲಿ ಸೋಮವಾರ ದಸರಾ ಧರ್ಮ ಸಮ್ಮೇಳನದ ಪ್ರಥಮ ದಿನ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ನೆರವೆರಿಸಿದರು. ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ದಸರಾ ಧರ್ಮ ಸಮ್ಮೇಳನದ ಪ್ರಥಮ ದಿನ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ನೆರವೆರಿಸಿದರು. ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ನಾಸ್ತಿಕರು ಹೆಚ್ಚುತ್ತಿದ್ದಾರೆ ಎಂದು ಚರ್ಚಿಸಲಾಗುತ್ತದೆ. ಧರ್ಮಾಚರಣೆಯ ಬಗ್ಗೆ ಆಸಕ್ತಿಯಿದ್ದರೂ ಏನು, ಏಕೆ ಮತ್ತು ಹೇಗೆ ಮಾಡಬೇಕು ಎಂಬುದರ ಮಾಹಿತಿಯ ಕೊರತೆಯ ಕಾರಣ ಅಂತಹವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಸೋಮವಾರ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ನಡೆದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಅವರ ಪ್ರಥಮ ದಿನದ ಇಷ್ಟಲಿಂಗ ಮಹಾಪೂಜೆಯಲ್ಲಿ ಅವರು ಮಾತನಾಡಿದರು.

‘ವಿಶಿಷ್ಟ ರೀತಿಯಲ್ಲಿ, ಶ್ರದ್ಧೆ, ಭಕ್ತಿಯಿಂದ ನೆರವೆರುವ ರಂಭಾಪುರಿ ಶ್ರೀಗಳ ಮಹಾಪೂಜೆಯನ್ನು ಗಮನಿಸುವುದು, ಗುರುವಾಣಿ ಆಲಿಸುವುದು ನಿಜವಾದ ಅನುಷ್ಠಾನವಾಗಿದೆ. ದಸರಾ ಶಿವ-ಶಕ್ತಿ ಸಿದ್ಧಾಂತದ ಪ್ರತೀಕವಾಗಿದೆ’ ಎಂದು ಹೇಳಿದರು.

ADVERTISEMENT

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ರೇಣುಕಾದಿ ಪಂಚಾಚಾರ್ಯರ ಧ್ಯೇಯ ಮನುಕುಲದ ಉದ್ಧಾರವಾಗಿದೆ. ರಂಭಾಪುರಿ ಶಿವಾಚಾರ್ಯರು ಲೋಕಲ್ಯಾಣದ ಉದ್ದೇಶದಿಂದ ಪ್ರತಿವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ದಸರಾ ಧರ್ಮ ಸಮ್ಮೇಳನ ನಡೆಸಿ, ಇಷ್ಟಲಿಂಗ ಮಹಾಪೂಜೆ ಕೈಗೊಳ್ಳುವುದು ಸಂಪ್ರದಾಯ. ಇಷ್ಟಲಿಂಗ ಗುರುವಿನಿಂದ ಪಡೆದು ಧರಿಸುವುದು ಮಹಾಭಾಗ್ಯ’ ಎಂದು ಹೇಳಿದರು.

ಯಡಿಯೂರು ರೇಣುಕ ಶಿವಾಚಾರ್ಯರು, ಮಳಲಿ ನಾಗಭುಷಣ ಶಿವಾಚಾರ್ಯರು, ಹುಡಗಿ ವಿರೂಪಾಕ್ಷ ಶಿವಾಚಾರ್ಯರು ಉಪಸ್ಥಿತರಿದ್ದರು.

ವಿಶಿಷ್ಟ ಪೂಜೆ ಮೊಳಗಿದ ವೇದಘೋಷ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ವಿಶಿಷ್ಟ ಆಸನದ ಮೇಲೆ ಕುಳಿತು ಇಷ್ಟಲಿಂಗ ಮಹಾಪೂಜೆ ನಡೆಸಿದರು. ಹಣೆತುಂಬ ವಿಭೂತಿ ತಲೆ ಮೇಲೆ ರುದ್ರಾಕ್ಷಿ ಕಿರೀಟ ಕೊರಳಲ್ಲಿ ವಿವಿಧ ರೀತಿಯ ಮಾಲೆ ಧರಿಸಿ ವೈದಿಕರ ಮಂತ್ರಘೋಷ ವಾದ್ಯ ಮೇಳಗಳೊಂದಿಗೆ ಪೂಜೆ ಕೈಗೊಂಡರು. ಮಹಿಳೆಯರು ಮೆರವಣಿಗೆಯೊಂದಿಗೆ ಕುಂಭ ಕಲಶಗಳಲ್ಲಿ ತುಂಬಿ ತಂದಿದ್ದ ಅಗ್ರೋದಕದಿಂದ ಸತತ ಮೂರು ತಾಸುಗಳವರೆಗೆ ಪೂಜೆ ನಡೆಯಿತು. ಬಳಿಕ ಪಾದಪೂಜೆ ನಡೆಯಿತು. ಭಕ್ತರು ಸಾಲಾಗಿ ಬಂದು ದರ್ಶನ ಪಡೆದರು. ರಂಭಾಪುರಿಶ್ರೀ ಮಾತನಾಡಿ ‘ವೀರಶೈವ ತತ್ವ ಸಿದ್ಧಾಂತದ ಪ್ರಚಾರಕ್ಕಾಗಿ ದಸರಾ ದರ್ಬಾರ ಕಾರ್ಯಕ್ರಮ ಹಾಗೂ ಇಷ್ಟಲಿಂಗ ಮಹಾಪೂಜೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಧರ್ಮ ಸಮ್ಮೇಳನದಲ್ಲಿ ಇಂದು ಸೆ.23ರಂದು ಸಂಜೆ 6.30ಕ್ಕೆ ಅಕ್ಕಮಹಾದೇವಿ ಕಾಲೇಜಿನ ಆವರಣದಲ್ಲಿ ನಡೆಯುವ ಧರ್ಮ ಸಮ್ಮೇಳನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಂಸದ ಸಾಗರ ಖಂಡ್ರೆ ಲಾತೂರ ಸಂಸದ ಶಿವಾಜಿ ಕಾಳಗೆ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ ಧನರಾಜ ತಾಳಂಪಳ್ಳಿ ಆನಂದ ದೇವಪ್ಪ ಶಶಿಕಾಂತ ದುರ್ಗೆ ಬಸವರಾಜ ಸ್ವಾಮಿ ನೀಲಕಂಠ ರಾಠೋಡ ಪಾಲ್ಗೊಳ್ಳುವರು. ಚಿಮಣಗೇರಿ ವೀರಮಹಾಂತೇಶ್ವರ ಶಿವಾಚಾರ್ಯರು ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಬಸವರಾಜ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುವರು. ಬೆಳಗುಂಪಾ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಉಪನ್ಯಾಸ ನೀಡುವರು. ವಿಶ್ವಜೀತ ಢವಳೆ ಅವರಿಗೆ ರಂಭಾಪುರಿ ಯುವಸಿರಿ ಪ್ರಶಸ್ತಿ ನೀಡಲಾಗುತ್ತದೆ. ನಂತರ ಭರತನಾಟ್ಯ ಸಂಗೀತ ಕಾರ್ಯಕ್ರಮವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.