ADVERTISEMENT

ಮಂದಕನಳ್ಳಿ | ಸುಸಜ್ಜಿತ ಚಿತಾಗಾರ ನಿರ್ಮಾಣ

ನರೇಗಾ ಅನುದಾನ ಬಳಸಿ ಕಾಮಗಾರಿ

ನಾಗೇಶ ಪ್ರಭಾ
Published 13 ಜುಲೈ 2024, 5:43 IST
Last Updated 13 ಜುಲೈ 2024, 5:43 IST
ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸುಸಜ್ಜಿತ ಚಿತಾಗಾರ
ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸುಸಜ್ಜಿತ ಚಿತಾಗಾರ   

ಮಂದಕನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮ ಪಂಚಾಯಿತಿಯು ಮೃತರ ಶವ ಸಂಸ್ಕಾರಕ್ಕೆ ತಾಲ್ಲೂಕಿನಲ್ಲೇ ಮೊದಲ ಬಾರಿಗೆ ಎರಡು ಸುಸಜ್ಜಿತ ಚಿತಾಗಾರಗಳನ್ನು ನಿರ್ಮಿಸಿ ಗಮನ ಸೆಳೆದಿದೆ.

ಗ್ರಾಮದ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಸ್ಮಶಾನ ಭೂಮಿಗಳಲ್ಲಿ ಪ್ರತ್ಯೇಕ ಚಿತಾಗಾರ ನಿರ್ಮಾಣ ಮಾಡಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಚಿತಾಗಾರ ನಿರ್ಮಾಣಕ್ಕೆ ಬಳಸಿಕೊಂಡಿದೆ.

ಪರಿಶಿಷ್ಟ ಜಾತಿ ಸ್ಮಶಾನ ಭೂಮಿಯ ಚಿತಾಗಾರದಲ್ಲಿ ಈಗಾಗಲೇ ಮೃತರೊಬ್ಬರ ಶವ ಸಂಸ್ಕಾರ ನೆರವೇರಿದ್ದು, ಸಾರ್ವಜನಿಕರಿಗೆ ಶವ ಸಂಸ್ಕಾರಕ್ಕೆ ಅನುಕೂಲವಾಗಿದೆ.
ಚಿತಾಗಾರ ನಿರ್ಮಾಣ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ನರೇಗಾ ಯೋಜನೆ ಬಳಸಿಕೊಂಡು ಎರಡು ಸುಸಜ್ಜಿತ ಚಿತಾಗಾರಗಳನ್ನು ನಿರ್ಮಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ ಚಾಂಬೋಳೆ ತಿಳಿಸಿದರು.

ADVERTISEMENT

ಪಿಲ್ಲರ್ ನಿರ್ಮಿಸಿ ಚಿತಾಗಾರ ಕಟ್ಟಲಾಗಿದೆ. ಒಳಗಡೆ ಬೆಡ್ ಹಾಕಲಾಗಿದೆ. ಮೇಲುಗಡೆ ತಗಡುಗಳ ಶೆಡ್ ಅಳವಡಿಸಿದ್ದು, ಹೊಗೆ ಹೋಗಲು ಸ್ಥಳ ಬಿಡಲಾಗಿದೆ ಎಂದು ಹೇಳಿದರು.

ಚಿತಾಗಾರಗಳಿಗೆ ತಲಾ ₹3 ಲಕ್ಷ ವೆಚ್ಚವಾಗಿದೆ. ಆವರಣದಲ್ಲಿ ಬರುವ ದಿನಗಳಲ್ಲಿ ಸಸಿ ನೆಡುವ, ಶವ ಸಂಸ್ಕಾರಕ್ಕೆ ಬಂದವರಿಗೆ ಕಾಲು ತೊಳೆದುಕೊಳ್ಳಲು ನೀರಿನ ತೊಟ್ಟಿ, ಕುಡಿಯುವ ನೀರಿಗಾಗಿ ಕಿರಿದಾದ ನೀರಿನ ಟ್ಯಾಂಕ್ ನಿರ್ಮಿಸುವ ಹಾಗೂ ಸಿಮೆಂಟ್ ಆಸನಗಳನ್ನು ಅಳವಡಿಸುವ ಯೋಜನೆ ಇದೆ ಎಂದು ತಿಳಿಸಿದರು.

ಹಿಂದೆ ಸ್ಮಶಾನಗಳಲ್ಲಿ ಮಳೆಗಾಲದಲ್ಲಿ ಶವ ಸುಡಲು ಬಹಳ ತೊಂದರೆಯಾಗುತ್ತಿತ್ತು. ಕೆಲವೊಮ್ಮೆ ಶವ ಸರಿಯಾಗಿ ಸುಡುತ್ತಿರಲಿಲ್ಲ. ಬಹಳ ಸಮಯ ಬೇಕಾಗುತ್ತಿತ್ತು. ಶವಕ್ಕೆ ಹಚ್ಚಿದ ಬೆಂಕಿ ಇತರೆಡೆ ವ್ಯಾಪಿಸಿಕೊಳ್ಳುವ ಭೀತಿಯೂ ಇರುತ್ತಿತ್ತು. ಚಿತಾಗಾರದಿಂದ ಯಾವುದೇ ಕಾಲದಲ್ಲೂ ಶವ ಸಂಸ್ಕಾರ ನಡೆಸಲು ಸಹಾಯವಾಗಿದೆ. ಸೌದೆ ಹಾಗೂ ಇತರ ಖರ್ಚು ತಗ್ಗಲಿದೆ ಎಂದು ಹೇಳಿದರು.

ಮಂದಕನಳ್ಳಿ ಗ್ರಾಮದಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇದೆ. ಚಿತಾಗಾರಗಳ ನಿರ್ಮಾಣದಿಂದ ಸಾರ್ವಜನಿಕರಿಗೆ ಮೃತರ ಶವ ಸಂಸ್ಕಾರಕ್ಕೆ ಆಗುತ್ತಿದ್ದ ಸಮಸ್ಯೆ ನಿವಾರಣೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ಕೋಳಿ ತಿಳಿಸಿದರು.

ನರೇಗಾದಡಿ ಸಾರ್ವಜನಿಕರಿಗೆ ಉಪಯೋಗವಾಗುವ ವಿವಿಧ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಚಿತಾಗಾರದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿರುವುದು ಸಂತಸ ಉಂಟು ಮಾಡಿದೆ
ದೇವಪ್ಪ ಚಾಂಬೋಳೆ ಮಂದಕನಳ್ಳಿ, ಪಿಡಿಒ
ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ನೆರವಾಗಲು ಗ್ರಾಮ ಪಂಚಾಯಿತಿಯಿಂದ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಈಡೇರಿದೆ.
ನರೇಂದ್ರ ಕೋಲಿ, ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.