ಹೊನ್ನಿಕೇರಿ (ಜನವಾಡ): ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಮತ್ತು ಜಗದ್ಗುರು ಪಂಚಾಚಾರ್ಯ ಯುವಕ ಸಂಘದಿಂದ 1,11,111 ಸಸಿ ನೆಡುವ ಅಭಿಯಾನಕ್ಕೆ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಸಿದ್ಧೇಶ್ವರ ದೇಗುಲದ ಪರಿಸರದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದ ಸಾಮಾಜಿಕ ಅರಣ್ಯ ವಿಭಾಗದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಮಾತನಾಡಿ, ‘ಪರಿಸರ ಸಂರಕ್ಷಣೆಗೆ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಅಭಿಯಾನಕ್ಕೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.
‘ಅಭಿಯಾನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಪರಿಸರ ಉಳಿವಿಗೆ ಸಸಿಗಳನ್ನು ನೆಟ್ಟು ಬೆಳೆಸಬೇಕು’ ಎಂದು ಬೇಮಳಖೇಡದ ರಾಜಶೇಖರ ಶಿವಾಚಾರ್ಯ ಸಲಹೆ ನೀಡಿದರು.
ರಾಜಕುಮಾರ ಪಾಟೀಲ ಮಾತನಾಡಿದರು. ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ ಸಾನ್ನಿಧ್ಯ ವಹಿಸಿದ್ದರು. ಕಪಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಸಿಕೇನಪುರೆ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ನಾಗರಾಜ ಮಠ, ಮಯೂರಕುಮಾರ ಗೋರಮೆ, ಸಿದ್ದಯ್ಯ ಸ್ವಾಮಿ, ಶಿವಾನಂದ ಸ್ವಾಮಿ, ಶಿವಶಂಕರ ಬೆಳಮಗಿ, ಮಹೇಶ ಪಾಟೀಲ, ಚೇತನ್ ಸೋರಳ್ಳಿ, ಕಾವೇರಿ ಸ್ವಾಮಿ ಇದ್ದರು. ಪ್ರವೀಣ ಸ್ವಾಮಿ ಸ್ವಾಗತಿಸಿದರು. ಸಚ್ಚಿದಾನಂದ ಬಿರಾದಾರ ನಿರೂಪಿಸಿದರು. ಪ್ರಶಾಂತ ಸ್ವಾಮಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.