ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಶುಕ್ರವಾರ ಹಜರತ್ ಸಾನಿಸಾಹೇಬ್(ಮಡ್ಡಿಪೀರ್) ದೇವರ ಜಾತ್ರೆ ಸಂಭ್ರಮದಿಂದ ಜರುಗಿತು.
ದಿನವೀಡಿ ಸುರಿದ ಜಿಟಿಜಿಟಿ ಮಳೆಯ ನಡುವೆಯು ಅಸಂಖ್ಯಾತ ಭಕ್ತರು ದರ್ಶನ ಪಡೆದರು. ಮಳೆಯನ್ನೂ ಲೆಕ್ಕಿಸದೆ ಲೆಕ್ಕಿಸದೇ ದಿನವೀಡಿ ಹಿರಿಯರು, ಮಹಿಳೆಯರು, ಮಕ್ಕಳು ಸರತಿ ಸಾಲಿನಲ್ಲಿ ಆಗಮಿಸಿ ಹೂವು, ನೈವೇದ್ಯ, ಕಾಯಿ, ಕರ್ಪೂರ, ಊದಬತ್ತಿ ಅರ್ಪಿಸಿ ದರ್ಶನ ಪಡೆದರು. ಇನ್ನೂ ಕೆಲ ಭಕ್ತರು ಸಕ್ಕರೆ, ಪೇಡಾ, ಜಿಲೇಬಿ ಹಂಚಿ ತಮ್ಮ ಹರಕೆ ಈಡೇರಿಸಿದರು.
ದರ್ಗಾದ ಸೇವಕರು ಭಕ್ತರಿಗೆ ನವಿಲುಗರಿ ಕಟ್ಟನ್ನು ತಲೆಗೆ ತಾಗಿಸಿ ಆಶೀರ್ವದಿಸಿದರು.
ಕೋನಮೇಳಕುಂದಾ, ಹಲಬರ್ಗಾ, ತೇಗಂಪೂರ, ಸಿದ್ದೇಶ್ವರ ವಾಡಿ, ನೇಳಗಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ದರುಶನ ಪಡೆಯುತ್ತಿರುವ ದೃಶ್ಯ ಕಂಡು ಬಂತು. ಭಕ್ತರಿಗೆ ಅನ್ನದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಕವ್ವಾಲಿ ಗಾಯನ: ಇದೇ ವೇಳೆ ದರ್ಗಾದ ಪ್ರದೇಶದಲ್ಲಿ ನಡೆದ ಕವ್ವಾಲಿ ಗಾಯನ ಗಮನ ಸೆಳೆಯಿತು. ಜಿಲ್ಲೆಯ ವಿವಿಧ ಭಾಗದ ಗಾಯಕರು ವಿವಿಧ ಹಿಂದಿ, ಗಜಲ್ ಹಾಡುಗಳನ್ನು ಹಾಡಿ ಭಕ್ತರನ್ನು ಮನರಂಜಿಸಿದರು. ಮಕ್ಕಳು ಆಟಿಕೆ ಅಂಗಡಿಗಳಿಗೆ ಭೇಟಿ ನೀಡಿ ಆಟಿಕೆ ಸಾಮಗ್ರಿ ಖರೀದಿಸಿ ಜಾತ್ರೆಯ ಸಂಭ್ರಮ ಹೆಚ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.